ಹಾಸನ/ಸಕಲೇಶಪುರ: ಪಶ್ಚಿಮ ಘಟ್ಟದ ಕಾಡಿಗೆ ತಗುಲಿದ ಆಕಸ್ಮಿಕ ಬೆಂಕಿ ನಂದಿಸಲು
ಹೋದ ಡಿಆರ್‌ಎಫ್‌ಒ ಹಾಗೂ ಇಬ್ಬರು ಆರ್‌ಆರ್‌ಟಿ ಸಿಬ್ಬಂದಿ ಸೇರಿ ಒಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಸಮೀಪ ನಡೆದಿದೆ. , ಸುಟ್ಟ ಗಾಯಗಳಿಂದ ನರಳುತ್ತಿದ್ದವರನ್ನು ಕಾಡಿನಿಂದ ಸುಮಾರು 5 ಕಿಮೀ ದೂರ ಹೊತ್ತು ತಂದ ಗ್ರಾಮಸ್ಥರು ಹಾಗೂ
ಅರಣ್ಯ ಇಲಾಖೆ ಸಿಬ್ಬಂದಿ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಡೆದಿದ್ದೇನು?: ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪದ ಪಶ್ಚಿಮಘಟ್ಟ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ನಂದಿಸಲು ಡಿಆರ್‌ಎಫ್‌ಒ ಮಂಜುನಾಥ್, ಫಾರೆಸ್ಟರ್ ಸುಂದರೇಶ್ ಮತ್ತು ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿಗಳಾದ ತುಂಗೇಶ್ ಹಾಗೂ ಮಹೇಶ್ ಎಂಬುವರು ತೆರಳಿದ್ದರು.
ಈ ವೇಳೆ ಕಾಳ್ಗಿಚ್ಚಿನ ಕೆನ್ನಾಲಗೆ ಬಿರುಗಾಳಿಗೆ ಧಗಧಗಿಸುತ್ತಿದ್ದುದರಿಂದ
ಮೂವರಿಗೆ ತಗುಲಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು, ಆಂಬ್ಯುಲೆನ್ಸ್ ಮೂಲಕ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ನಂತರ ಹಾಸನಕ್ಕೆ ಕರೆ ತಂದಿದ್ದಾರೆ. ಇವರಲ್ಲಿ ಮಂಜುನಾಥ್ ಮತ್ತು ಸುಂದರೇಶ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅದೃಷ್ಟವಶಾತ್
ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.