ಹಾಸನ, ನ.06 : ಹಾಸನದ ಅದಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಸಕಲ ಧಾರ್ಮಿಕ ವಿದಿವಿಧಾನಗಳ ಮೂಲಕ ದೇವಾಲಯದ ಬಾಗಿಲು ಮುಚ್ಚಲಾಗಿದ್ದು, 9 ದಿನಕ್ಕೆ ದರ್ಶನ ಮಹೋತ್ಸವ ಮುಕ್ತಾಯಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹಾಗೂ ಶಾಸಕರಾದ ಪ್ರೀತಂ ಜೆ ಗೌಡ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ನಗರಸಭೆ ಅಧ್ಯಕ್ಷರಾದ ಮೋಹನ್ ಮತ್ತಿತರರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಹಾಕಲಾಯಿತು.
ಕೊನೆಯ ದರ್ಶನಕ್ಕೆ ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶ ಇಲ್ಲದಿದ್ದರೂ ಸಹ ನೂರಾರು ಭಕ್ತರು ನೆರೆದಿದ್ದ ಎಲ್ಲರಿಗೂ ಜಿಲ್ಲಾಡಳಿತದ ವತಿಯಿಂದ ಅವಕಾಶ ಕಲ್ಪಿಸಲಾಯಿತು.
ದೇವಾಲಯದ ಬಾಗಿಲು ಮುಚ್ಚಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಈ ಬಾರಿ ಅಂದಾಜು ನಾಲ್ಕು ಲಕ್ಷ ಜನರಿಂದ ದೇವಿ ದರ್ಶನವಾಗಿದೆ ಎಲ್ಲವೂ ಅಚ್ಚು ಕಟ್ಟಾಗಿ ನಡೆದಿದೆ ಎಂದರು.
ದೇವಿಯ ದರ್ಶನಕ್ಕೆ ಜಿಲ್ಲೆಯ, ಹೊರಜಿಲ್ಲೆಯ ಹಾಗೂ ಹೊರ ರಾಜ್ಯಗಳಿಂದ ಬಂದಂತಹ ಭಕ್ತಾದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಸುವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗಿತ್ತು ಎಂದು ಸಚಿವರು ತಿಳಿಸಿದರು.
ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ಸಚಿವರು ಹೇಳಿದರು.
ರಾಜ್ಯದ ಜನತೆಗೆ ದೇವರು ಆರ್ಶೀವಾದ ಕರುಣಿಸಲಿ ಎಂದು ಹಾರೈಸುತ್ತಾ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಂಪೂರ್ಣ ಸಹಕಾರ ನೀಡಿದಂತಹ ಆಡಳಿತ ವರ್ಗ, ಭಕ್ತಾದಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಶಾಸಕರಾದ ಪ್ರೀತಮ್ ಜೆ. ಗೌಡ ಅವರು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಜಾತ್ರಾ ಮಹೋತ್ಸವವನ್ನು ನೆರವೇರಿಸಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಹೊರ ರಾಜ್ಯಗಳಿಂದ ಬಂದಂತಹ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು. ಮುಂದಿನ ಬಾರಿ ಇನ್ನು ಹೆಚ್ಚು ವ್ಯವಸ್ಥಿತವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಆರ್,ಗಿರೀಶ್ ಅವರು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿವಿಧ ಇಲಾಖೆಯವರ ಮಾರ್ಗದರ್ಶನದಿಂದ ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ಪೂರ್ಣಗೊಂಡಿದೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಹಾಗೇ ಹಾಸನಾಂಬ ದೇವಿ ದರ್ಶನ ಪಡೆದ ಭಕ್ತಾದಿಗಳ ಜೀವನದಲ್ಲಿ ಆ ದೇವಿ ಬೆಳಕು ನೀಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ನಗರಸಭೆ ಅಧ್ಯಕ್ಷರಾದ ಮೋಹನ್, ತಹಶೀಲ್ದಾರ್ ನಟೇಶ್, ವಾರ್ತಾಧಿಕಾರಿ ವಿನೋದ್ ಚಂದ್ರ, ಡಿ,ವೈ.ಎಸ್.ಪಿ ಉದಯ್ ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.