ಶಿಲ್ಪಕಲೆಯ ವಾಡಿಕೆಯಾಗಿ ಮೆರೆಯುವ ಹಾಸನಾಂಬ ರಂಗಮಂದಿರವು ಅತ್ಯುತ್ತಮ ನೃತ್ಯಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು

0

ಅದ್ವಯ ಸಾಧಿಸಿದ ಅದ್ವಿತೀಯ ನೃತ್ಯ ಪ್ರಸ್ತುತಿ-ಸ್ರೃತಿ

ಹೇಮಾವತಿ ನದಿಯ ತಟದಲ್ಲಿ ವಿರಾಜಿಸುವ, ಶಿಲ್ಪಕಲೆಯ ವಾಡಿಕೆಯಾಗಿ ಮೆರೆಯುವ ಹಾಸನದಲ್ಲಿ ನಗರದ ಪ್ರತಿಷ್ಠಿತ ಹಾಸನಾಂಬ ರಂಗಮಂದಿರವು ದಿನಾಂಕ 03-12-2022 ರಂದು ಅತ್ಯುತ್ತಮ ನೃತ್ಯಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

ಕುಮಾರಿ, ಸಮೀಕ್ಷಾ ಮನುಕುಮಾರ್ ಮತ್ತು ಕಾಮಾರಿ ಪೂಜಾ ಸುಗಮ್ ಎಂಬ ಇಬ್ಬರು ಯುವ ನೃತ್ಯಾಂಗನೆಯರು ಅರ್ಥಪೂರ್ಣವಾದ ಸ್ಮೃತಿ ನೃತ್ಯ ಕಾರ್ಯಕ್ರಮವನ್ನು ಸಾದರಪಡಿಸಿದರು. ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ಭೌತಿಕವಾಗಿ ಕಲಾವಲಯವನ್ನು ಅಗಲಿದ ಹಿರಿಯ ವಾಂಶಿಕ ವಿದ್ವಾಂಸರಾದ ಕೀರ್ತಿಶೇಷ ವಿದ್ವಾನ್ ಎ. ಪಿ. ಪ್ರಕಾಶ್ ಹಾಗೂ ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ವಿದ್ವಾನ್ ಲಿಂಗರಾಜುರವರಿಗೆ ಭಾವಪೂರ್ಣ ನಮನದೊಂದಿಗೆ ಸಮರ್ಪಿಸಲಾಯಿತು.

ವಿಶ್ವಮಾನ್ಯತೆ ಹೊಂದಿರುವ ಅದ್ಭುತ ನರ್ತನ ಕಲಾವಿದರಾದ ವಿದ್ವಾನ್ ವಿಜಯ್ ಕುಮಾರ್ ರವರ ದಕ್ಷ ಮಾರ್ಗದರ್ಶನ ಮತ್ತು ನೃತ್ಯ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿತು.

ಆರಭಿ ರಾಗ, ಆದಿತಾಳಕ್ಕೆ ಅಳವಟ್ಟ ಸುಪ್ರಸಿದ್ಧ ಪ್ರಷ್ಪಾಂಜಲಿಯೊಂದಿಗೆ ಆರಂಭವಾದ ಈ ಪ್ರಸ್ತುತಿ ಕುಮುದಕ್ರಿಯ ರಾಗ, ಆದಿತಾಳಕ್ಕೆ ನಿಯುಕ್ತವಾದ ಅರ್ಧನಾರೀಶ್ವರಂ ಕೃತಿಯೊಂದಿಗೆ ಮುಂದುವರೆಯಿತು. ಕೇವಲ ಭೌತಿಕವಾಗಿ ಸ್ತ್ರೀ ಪುರುಷ ಅಂಶಗಳನ್ನಷ್ಟೇ ಬಿಂಬಿಸುವ ಸಾಮಾನ್ಯ ಪ್ರಕ್ರಿಯೆಗಿಂತ ಈ ಪ್ರಯೋಗ ಬಹಳ ವಿಭಿನ್ನವಾಗಿತ್ತು. ಶಿವಶಿವೆಯರಲ್ಲಿನ ಅಭೇದಕ್ಕೆ ಹೆಚ್ಚಿನ ಒತ್ತು ಕೊಟ್ಟು ಈರ್ವರು ಕಲಾವಿದೆಯರ ಪ್ರಸ್ತುತಿಯಲ್ಲಿ ಆನ್ವಯವನ್ನು ಗುರು ವಿಜಯ್ ಕುಮಾರ್ ರವರು ಸಮರ್ಥವಾಗಿ ಸಾಧಿಸಿದರು. ಮುಂದೆ ಭಾವರಸಪಾಕದಂತಿದ್ದ ಪದವರ್ಣ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಚಾರುಕೇಶಿ ರಾಗ, ಆದಿ ತಾಳಕ್ಕೆ ಅಳವಟ್ಟ ಈ ಪ್ರಸ್ತುತಿಯಲ್ಲಿ ಕೃಷ್ಣ ಲೀಲಾ ಕಥನಕ್ಕಿಂತ ಪ್ರೇಯಸಿಯಾಗಿ, ಭಕ್ತಿಯಾಗಿ ನಾಯಕಿ ಹೇಗೆ ಕೃಷ್ಣ ಸಾನ್ನಿಧ್ಯವನ್ನು ಬಯಸಿದ್ದಳು ಎಂಬ ಅಂಶ ಬಹಳ ಪ್ರಕರ್ಷದಿಂದ ಸಾಬೀತಾಯಿತು. ಜೀವನದ ಹಾವು ಏಣಿ ಆಟವನ್ನು ಸಂಚಾರಿ ಭಾಗದಲ್ಲಿ ಬಹಳ ಜಾಣೆಯಿಂದ

ಸಂಯೋಜಿಸಲಾಗಿತ್ತು. ಪದವರ್ಣದಲ್ಲಿ ಕಂಡುಬಂದ ಜತಿಗಳು ಕ್ಲಿಷ್ಟಕರವೂ ಆಕರ್ಷಣೀಯವೂ ಆಗಿದ್ದು ಗುರು ಮತ್ತು ಶಿಷ್ಯಯರಿಬ್ಬರ

ಪ್ರತಿಭೆಯನ್ನು ಒರೆಗೆ ಹಚ್ಚಿತ್ತು. ಸ್ವರಸಂಧಾನವೇ ಆಗಲಿ, ಸಂಚಾರಿಯ ಚಿತ್ರಣವಾಗಲಿ- ಎಲ್ಲವೂ ಬಹಳ ಹದದಿಂದ ಕೂಡಿತ್ತು.

ಪ್ರಸ್ತುತಿಯುದ್ದಕ್ಕೂ ಅಲ್ಲಲ್ಲಿ ಕಂಡುಬಂದ ದಿವ್ಯ ಮೌನ ಪ್ರೇಕ್ಷಕರ ಭಾವಕೋಶದಲ್ಲಿ ನೂರಾರು ಅಲೆಯೆಬ್ಬಿಸಿತ್ತು.

ಕಾರ್ಯಕ್ರಮದ ನಾಲ್ಕನೇ ಪ್ರಸ್ತುತಿಯಾಗಿ ರೀತಿಗಳರಾಗ, ಮಿಶ್ರಛಾಪು ತಾಳದ ಜನನಿ ನಿನ್ನು ವಿನಾ ಕೃತಿ ಭಕ್ತಿಯ ಪರಾಕಾಷ್ಠೆ ಸೂಚಿಸಿತು.

ಕಾರ್ಯಕ್ರಮ ಶೋಭಾಯಮಾನವಾಗಿ ತಿಲಿಂಗ್ ರಾಗದ ತಿಲ್ಲಾನದೊಡನೆ ಸಂಪನ್ನತೆ ಕಂಡಿತು.

ಪೂರ್ಣ ಕಾರ್ಯಕ್ರಮದಲ್ಲಿ ಈರ್ವರು ನೃತ್ಯಕಲಾವಿದೆಯರ ಕಲಾಜಾ, ಅವರಿಬ್ಬರಲ್ಲಿನ ಸಮಾನ ಮನಸ್ಕತೆ, ವಿಭಿನ್ನ ಮನಸ್ಥಿತಿಗಳನ್ನು ಏಕತ್ವದಲ್ಲಿ ಬೆಸೆಯುವ ಸಾಂಗತ್ಯ, ಬಹು ಶುದ್ಧ ಅಂಗವಿನ್ಯಾಸ, ರೇಖಾ ವಿನ್ಯಾಸಗಳು, ನೃತ್ತದ ನಿಖರತೆ, ಅಭಿನಯದ ಗಹನತೆ ಎಲ್ಲವೂ ಸ್ಪಷ್ಟವಾಗಿ ಗೋಚರಿಸಿತು.

ಈ ಕಾರ್ಯಕ್ರಮಕ್ಕೆ ಗುರು ವಿಜಯ್ ಕುಮಾರ್ ರವರ ನಿಪುಣ ನಟ್ಟುವಾಂಗ ಮತ್ತು ನೃತ್ಯ ನಿರ್ದೇಶನ, ವಿದ್ವಾನ್ ರಘುರಾಂ ರವರ ಭಾವಪೂರ್ಣ ಗಾಯನ, ವಿದ್ವಾನ್ ಶ್ರೀರಂಗಮ್ ರವರ ಚಮತ್ಕಾರಪೂರ್ಣ ಮೃದಂಗವಾದನ, ವಿದ್ವಾನ್ ಎ ಪಿ ಕೃಷ್ಣಪ್ರಸಾದ್ ರವರ ಮೋಹಕ ವೇಣುವಾದನ, ವಿದುಷಿ, ರೂಪಶ್ರೀ ಮಧುಸೂದನ್ ರವರ ಉತ್ತಮ ನಿರೂಪಣೆ ಮತ್ತು ನುರಿತ ತಂತ್ರಜ್ಞರ ಕಾರ್ಯಕ್ಷಮತೆ-ಎಲ್ಲವೂ ಪರಿಪೂರ್ಣತೆಯನ್ನು ನೀಡಿತ್ತು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಹಿರಿಯ ನೃತ್ಯಗುರುಗಳಾದ ನಾಟ್ಯಶ್ರೀ ವಿದುಷಿ, ಅಂಬಳೆ ರಾಜೇಶ್ವರಿಯವರು ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಸಿದ್ಧ ಸಂಗೀತ ವಿದ್ವಾಂಸರಾದ ವಿದ್ವಾನ್ ಬಿ ಎನ್ ಎಸ್ ಮುರಳಿರವರು ಕಲಾಂಗನೆಯರನ್ನು ಹರಸಿದರು.

ಸಮೀಕ್ಷಾರವರ ಪೂರ್ವ ಗುರುಗಳಾದ ಗುರು ವಿದ್ವಾನ್ ಉನ್ನತ್ ಜೈನ್ ರವರನ್ನು ಹಾಗೂ ಪೂಜಾರವರ ತಾಯಿ ಮತ್ತು ಗುರು ಡಾ|| ಕೃಪಾ ಫಡೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ನ ಟ್ರಸ್ಟಿಗಳು ಮತ್ತು ಕುಮಾರಿ, ಸಮೀಕ್ಷಾರವರ ಪೋಷಕರೂ ಆದ ಶ್ರೀಮತಿ ಪವಿತ್ರ ಮತ್ತು ಶ್ರೀ ಮನುಕುಮಾರ್ ರವರು ಹಾಗೂ ಮೈಸೂರಿನ ನೃತ್ಯಗಿರಿ ಸಂಸ್ಥೆಯ ಮುಖ್ಯಸ್ಥರು ಮತ್ತು ಕುಮಾರಿ ಪೂಜಾ ರವರ ಪೋಷಕರೂ ಆದ ಡಾ|| ಕೃಪಾ ಫ ಮತ್ತು ಶ್ರೀ ವಿಜಯ್ ಕುಮಾರ್ ರವರು ಕಾರ್ಯಕ್ರಮದ ಯಶೋಭಾಜನರಾಗಿ ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಬಹಳ ಅರ್ಥಪೂರ್ಣವಾಗಿದ್ದ ಈ ಕಾರ್ಯಕ್ರಮ ಆಗಲಿದ ಆತ್ಮಗಳಿಗೆ ಚಿರಶಾಂತಿಯನ್ನೂ, ಸಭಾಂಗಣ ಕಿಕ್ಕಿರಿದು ತುಂಬಿದ್ದ ಸಹೃದಯರಿಗೆ ರಸದೌತಣವನ್ನೂ ನೀಡಿತು.

LEAVE A REPLY

Please enter your comment!
Please enter your name here