ಹಾಸನ: 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಳಗೆ ಹಾಸನ ಕ್ಷೇತ್ರದಿಂದ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದಲ್ಲಿ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿ ಕೆಲಸ ಮಾಡುತ್ತೇನೆ. ನಮ್ಮ ತಂದೆ ಹೆಚ್.ಎಸ್.ಪ್ರಕಾಶ್ ಅವರು ನಡೆದು ಬಂದ ದಾರಿಯಲ್ಲೇ ನಾನೂ ನಡೆಯುತ್ತೇನೆ ಎಂದು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.
ನಗರದ ಕುವೆಂಪು ರಸ್ತೆಯ ಬಳಿ ಇರುವ ರಘುಗೌಡರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ,
ಕಳೆದ ಮೂರು ದಿನಗಳ ಹಿಂದೆ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ನಾಯಕರಾದ ಹೆಚ್.ಡಿ. ರೇವಣ್ಣನವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ನಡೆದಿದ್ದು, ಅಂದು ಯಾವ ರೀತಿಯ ಗೊಂದಲ, ಗದ್ದಲ ಆಗಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಇದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಶಾಸಕರು ಗೆಲ್ಲಬೇಕು. ಚುನಾವಣೆ ಹತ್ತಿರ ಇರುವುದರಿಂದ ಈಗಲೇ ಅಭ್ಯರ್ಥಿ ಘೋಷಣೆ ಮಾಡಿದರೆ ಸಜ್ಜಾಗಬಹುದು. ಹಾಗಾಗಿ
ತಮಗೆ ಟಿಕೆಟ್ ಕೊಡಿ ಎಂದು ಪಕ್ಷದ ಕಾರ್ಯಕರ್ತರು ಹಾಗೂ ನಮ್ಮ ತಂದೆಯವರ ಅಭಿಮಾನಿಗಳು ಒತ್ತಾಯಿಸಿದರು. ಇದನ್ನು ಹೊರತು ಪಡಿಸಿ ಯಾವ ರೀತಿ ಗೊಂದಲ ಆಗಿಲ್ಲ ಎಂದು ವಿವರಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹಾಗೂ ಹೆಚ್.ಡಿ.ರೇವಣ್ಣನವರ ನೇತೃತ್ವದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದೊಳಗೆ ಯಾರಿಗೆ ಬೇಕಾದರೂ ಟಿಕೆಟ್ ಕೊಟ್ಟರೂ ನಾವು ಒಮ್ಮತದಿಂದ ಮತ್ತು
ಒಗ್ಗಟ್ಟಿನಿಂದ ಕೆಲಸ ಮಾಡಿ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತರಲಾಗುವುದು. ಭವಾನಿ ರೇವಣ್ಣನವರು ಪ್ರತಿ ತಾಲೂಕಿಗೂ ಸಂಚರಿಸುತ್ತಿದ್ದು, ಹಾಸನ ತಾಲೂಕಿಗೆ ಮಾತ್ರ ಬರುತ್ತಿಲ್ಲ. ಇದನ್ನೇ ಬೇರೆ ರೀತಿ ಅರ್ಥ ತಿಳಿದುಕೊಳ್ಳುವುದು ಬೇಡ. ಭವಾನಿ ರೇವಣ್ಣನವರು ಇಲ್ಲಿ ಸ್ಪರ್ಧೆ ಮಾಡಿದರೇ ನಾವು ಒಮ್ಮತದಿಂದ ಸ್ವಾಗತಿಸಿದರು ಎಂದರು.
ಇನ್ನು ಸಭೆ ನಡೆಯುವ ಕುರಿತು ವೈಯಕ್ತಿಕ ಪ್ಲೆಕ್ಸ್ ಹಾಕಬಾರದೆಂದು ಮೊದಲೆ ಹೇಳಲಾಗಿತ್ತು. ಆದರೂ
ಹಾಕಲಾಗಿತ್ತು. ರೇವಣ್ಣನವರು ಹೇಳಿದ ಮೇಲೆ ಅದನ್ನು ತೆಗೆದಿದ್ದಾರೆ. ನಾವು ಬ್ಯಾನರ್, ಪ್ಲೆಕ್ಸ್ ಹಾಕಿರಲಿಲ್ಲ ಎಂದು ಉತ್ತರಿಸಿದರು.
ಟಿಕೆಟ್ ಸಿಗದಿದ್ದರೆ ಬೇರೆ ಪಕ್ಷಕ್ಕೆ ಹೋಗುವ ಯೋಚನೆ ಇದೆಯಾ ಎಂಬ ಪ್ರಶ್ನೆಗೆ, ನಾನು ಬೇರೆ ಪಕ್ಷಕ್ಕೆ ಹೋದರೆ ನಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಜೆಡಿಎಸ್ ಪಕ್ಷದಲ್ಲೆ ನಾನು ಒಬ್ಬ ಪ್ರಬಲ ಆಕಾಂಕ್ಷಿಯಾಗಿ ವರಿಷ್ಠರಿಗೆ ಟಿಕೆಟ್ ಕೇಳುತ್ತೇನೆ. ಬೇರೆ ಯಾರ ಹೆಸರನ್ನು ಘೋಷಣೆ ಮಾಡುತ್ತಾರೆ. ಅದಕ್ಕೆ ಬದ್ಧರಾಗಿ ಕೆಲಸ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.