ಹಾಸನ: ದೇಶ ಸೇವೆ, ಈಶ ಸೇವೆ ಎರಡೂ ಪುಣ್ಯದ ಕೆಲಸ ಅಂತಾರೆ. ಹಾಗೆ ತಾಲೂಕಿನ ಅಂಬುಗ ಗ್ರಾಮದ ಯೋಧ ದಿನೇಶ್, ಹಗಲು ರಾತ್ರಿ ಎನ್ನದೆ ಬರೋಬ್ಬರಿ 20 ವರ್ಷ ದೇಶದ ಗಡಿ ಕಾಯುವ ಕಾಯಕವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ನಿಗದಿತ ಸೇವೆ ಮುಗಿಸಿ ತವರಿಗೆ ಮರಳಿದ ವೀರ ಯೋಧನಿಗೆ ಸ್ನೇಹಿತರು ಹಾಗೂ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು.
ಬೆಳಗ್ಗೆಯಿಂದಲೇ ನಗರದ ರೈಲ್ವೆ ನಿಲ್ದಾಣದಲ್ಲಿ ಯೋಧನ ತಂದೆ-ತಾಯಿ, ಪತ್ನಿ, ಮಕ್ಕಳು, ಸಂಬಂಧಿಕರು ಹಾಗೂ ಸ್ನೇಹಿತರು ಕಾದು ನಿಂತಿದ್ದರು.
ಬೆಳಗ್ಗೆ 10.45ಕ್ಕೆ ಮಂತ್ರಾಲಯ ಟ್ರೆöನ್‌ನಲ್ಲಿ ದಿನೇಶ್ ಬಂದಿಳಿಯುತ್ತಿದ್ದಂತೆಯೇ
ನೆರೆದಿದ್ದ ಎಲ್ಲರೂ ಪಟಾಕಿ ಸಿಡಿಸಿ, ಭಾರತ್ ಮಾತಾಕಿ ಜೈ ಎಂದು ಘೊಷಣೆ ಕೂಗಿ ಸಂಭ್ರಮದಿಂದ ಬರಮಾಡಿಕೊಂಡರು. ರೈಲ್ವೆ ನಿಲ್ದಾಣದ ಮುಖ್ಯದ್ವಾರಕ್ಕೆ ದಿನೇಶ್ ಆಗಮಿಸುತ್ತಿದ್ದಂತೆಯೇ ಪ್ರತಿಯೊಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೂವಿನ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಖುಷಿ ಪಟ್ಟರು. ಕುಟುಂಬ ಸದಸ್ಯರು ಆರತಿ ಬೆಳಗಿ ಬರಮಾಡಿಕೊಂಡರು.
ಈ ವೇಳೆ
ಪತ್ನಿ ವನಿತಾ, ಮಗಳು ಐಶ್ವರ್ಯ ಕೊಡಗು ಡಿಎಚ್‌ಒ ಡಾ.ಸತೀಶ್ ಕುಮಾರ್, ಸ್ನೇಹಿತ ಸೋಮಶೇಖರ್, ಜಗದೀಶ್ ಮೊದಲಾದವರು ಹಾರ ಹಾಕಿ, ಶಾಲು ಹೊದಿಸಿ ವೀರಪುತ್ರನನ್ನು ಬರಮಾಡಿಕೊಂಡರು.
ನಂತರ ತೆರೆದ ವಾಹನದಲ್ಲಿ ಯೋಧನನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಜನತೆ ಸ್ವಾಗತ ಕೋರಿದರು.
ದಿನೇಶ್ ಹಿನ್ನೆಲೆ:
ಅಂಬುಗ ಗ್ರಾಮದ ಚಿಕ್ಕೇಗೌಡ-ಸಣ್ಣಮ್ಮ ದಂಪತಿಯ ಎರಡನೇ ಪುತ್ರರಾಗಿರುವ ದಿನೇಶ್, ಎಂಎ ಪದವಿ ಪಡೆದು ಬಳಿಕ ತನ್ನಿಚ್ಛೆಯಂತೆಯೇ 2004 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಪಂಜಾಬ್, ಸಿಕ್ಕಿಂ, ಅಸ್ಸಾಂ, ಗುಜರಾತ್, ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ದೇಶ ಸೇವೆ ಮಾಡಿದ್ದಾರೆ.
ಅತೀವ ಸಂತೋಷ ಆಗಿದೆ:
ಈ ವೇಳೆ ಮಾತನಾಡಿದ ದಿನೇಶ್, ಗಡಿಯಲ್ಲಿ ಸೇವೆ ಮುಗಿಸಿ ಬಂದ ನನಗೆ ಇಷ್ಟೊಂದು ಪ್ರೀತಿಯ ಸ್ವಾಗತ ಸಿಕ್ಕಿದ್ದು ಅತೀವ ಸಂತಸ ತಂದಿದೆ. ತುಂಬಾ ಹೆಮ್ಮೆ ಆಗುತ್ತಿದೆ ಎಂದರು. ದೇಶದ ಅನೇಕ ಕಡೆ
ಸೇವೆ ಮಾಡಿದ್ದರೂ, ನಮ್ಮ ಕರ್ನಾಟಕದ ತರಹ ಬೇರೆ ಯಾವ ರಾಜ್ಯವೂ ಇಲ್ಲ ಎಂದ ಅವರು, ಇಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ಅದರಲ್ಲೂ ನಮ್ಮ ಹಾಸನದಲ್ಲಿ ಜನ್ಮ ತಾಳಲು ಇನ್ನೂ ಪುಣ್ಯ ಮಾಡಿರಬೇಕು ಎಂದರು.
ಸೈನಿಕ ಹುದ್ದೆ ತುಂಬಾ ರಿಸ್ಕ್, ಆದರೆ ಗೌರವವಿದೆ. ಸೇನೆ ಸೇರುವ ಆಸೆ ಇರುವವರು ಕೂಡಲೇ ಅದನ್ನು ಮಾಡಿ ಎಂದು ಯುವಕರಿಗೆ ಕಿವಿಮಾತು ಹೇಳಿದರು. ಗಡಿಯಲ್ಲಿ ಸೇವೆ ಮಾಡುವಾಗ ರಾತ್ರಿ 9, 10 ಗಂಟೆಯಾದರೇ ಸಾಕು ಎದುರಾಳಿಯಿಂದ ಫೈರಿಂಗ್ ಶುರುವಾಗುತ್ತದೆ. ಬಾರ್ಡರ್ ಪೋಸ್ಟ್ನಲ್ಲಿ ಮಲಗಿದ್ದಾಗ ಯಾವಾಗ ಗುಂಡಿನ ದಾಳಿ ಆಗುತ್ತದೆ ಎಂಬುದೇ ಗೊತ್ತಿರುವುದಿಲ್ಲ. ನಮ್ಮನ್ನು ದೇವರು ಕಾಪಾಡುತ್ತಾನೆ ಎಂದು ಮಲಗಿರುತ್ತೇವೆ. ಬೆಳಿಗ್ಗೆ ಎದ್ದರೆ
ಪಕ್ಕದ ಪೋಸ್ಟ್ ನಲ್ಲಿ ಫೈರಿಂಗ್ ಆಗಿ ಸಾವಾಗಿರುತ್ತದೆ ಎಂದು ಬೇಸರದಿಂದ ನುಡಿದರು.
ಮುಂದೆ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕೆಲಸಕ್ಕೆ ಹೋಗುವ ಗುರಿ ಹೊಂದಿರುವುದಾಗಿ ಹೇಳಿದರು.