ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಮುಖವಾದೂದು ಎನ್ನಬಹುದು. ಇದಕ್ಕೆ ಮುಖ್ಯ ಕಾರಣ ತಂಡದಲ್ಲಿರುವ ಆಟಗಾರರು ಮತ್ತು ಫ್ರಾಂಚೈಸಿಯ ಮೆಚ್ಚುಗೆಯ ನಡೆ. ಹೌದು, ಈ ಬಾರಿ ಕೂಡ ಆರ್ಸಿಬಿ ತಂಡ ಅಭಿಮಾನಿಗಳು ಹೆಮ್ಮೆ ಪಡುವಂತಹ ಕಾರ್ಯವೊಂದನ್ನು ಮಾಡಿದೆ. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ, ಕೋವಿಡ್-19 ಹತ್ತಿಕ್ಕಲು ನೆರವು ನೀಡಿದ ಹೀರೋಗಳಿಗೆ ಗೌರವ ಸಲ್ಲಿಸಲಿದೆ. ಆರ್‌ಸಿಬಿ ಈಗಾಗಲೇ ‘ಮೈ ಕೋವಿಡ್ ಹೀರೋಸ್’ (ನನ್ನ ಕೋವಿಡ್ ವೀರರು) ಎಂಬ ಹೆಸರಿನ ಜೆರ್ಸಿ ಹೊರ ತಂದಿದೆ.
ಐಪಿಎಲ್ ಅಭ್ಯಾಸದ ವೇಳೆ ಮತ್ತು ಇಡೀ ಟೂರ್ನಿಯುದ್ದಕ್ಕೂ ಆರ್‌ಸಿಬಿ ಈ ವಿಭಿನ್ನ ಜೆರ್ಸಿ ಧರಿಸಲಿದೆ. ಜೆರ್ಸಿಯ ಹಿಂಬಾಗ ಆಟಗಾರರ ಸಂಖ್ಯೆ ಇರುವ ಭಾಗದಲ್ಲಿ ‘ಮೈ ಕೋವಿಡ್ ಹೀರೋಸ್’ ಎಂದು ಪ್ರಿಂಟ್ ಹಾಕಲಾಗಿದೆ.
ಆರ್ಸಿಬಿಯ ಆಟಗಾರರು ಮೊದಲ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಗೀವ್ ಇಂಡಿಯಾ ಫೌಂಡೇಶನ್ಗೆ ನೀಡಲಾಗುತ್ತದೆ. ಕೊರೋನಾ ವೀರರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊರ ತರಲಾಗಿರುವ ಜೆರ್ಸಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲ, ‘ಆರ್ಸಿಬಿ ತಂಡ ಯಾವತ್ತಿಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಆಡುವುದಕ್ಕೋಸ್ಕರ ನಿಂತಿದೆ. ನಮ್ಮ ಕೋವಿಡ್ ಹೀರೋಗಳು ಪಟ್ಟು ಬಿಡದೆ ಶ್ರಮಿಸುವ ಮೂಲಕ ಕೋವಿಡ್ ಹತ್ತಿಕ್ಕುವ ಉದ್ದೇಶ ಸಾಕಾರಗೊಳಿಸುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ,’ ಎಂದರು.