ಹಾಸನ ಜಿಲ್ಲಾ ಕ್ರೀಡಾಂಗಣ ಕನ್ನಡ ರಾಜ್ಯೋತ್ಸವ ೨೦೨೨

0

ಹಾಸನ: ಕನ್ನಡ ಎಂದರೆ ಕೇವಲ ಒಂದು ಭಾಷೆಯಲ್ಲ, ಅದೊಂದು ಭಾವ-ಬಂಧ, ನಾವೆಲ್ಲಾ ಕನ್ನಡಿಗರು ಒಂದಾಗಿ ವಿಶ್ವವೇ ಮೆಚ್ಚುವಂತೆ ನಮ್ಮ ನಾಡನ್ನು ಸುಸಂಸ್ಕೃತವಾಗಿ ಕಟ್ಟಿ ಬೆಳೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಹಾಗೂ

ಧ್ವಜಾರೋಹಣೆ ನೆರವೇರಿಸಿ ಮಾತನಾಡಿ, ಆ ಮೂಲಕ ಭಾರತಾಂಬೆಯ ಹೆಮ್ಮೆಯ ತನುಜಾತೆಯ ಮಕ್ಕಳಾಗೋಣ ಎಂದು ಆಶಿಸಿದರು.
ಕ್ರಿಸ್ತಪೂರ್ವದಿಂದಲೂ ಹಂತ ಹಂತವಾಗಿ ಕನ್ನಡ ಬೆಳೆದುಕೊಂಡು ಬಂದಿದ್ದು, 8 ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ದೊರಕಿರುವುದು ನಮ್ಮ ಸಾಹಿತ್ಯ ಶ್ರೀಮಂತಿಕೆಯ ಸಂಕೇತ ಎಂದರು.

ಮಾನವ ಜನ್ಮ ತಾನೊಂದೇ ವಲಂ ಎಂದು ಸಾರಿದ ಆದಿ ಕವಿ ಪಂಪ ಅವರಿಂದ ಮೊದಲುಗೊಂಡು ಶ್ರೇಷ್ಠ ಕವಿಗಳು, ಸಾಹಿತಿಗಳು, ವಚನಕಾರರು, ದಾರ್ಶನಿಕರು, ನಮ್ಮ ಬದುಕಿಗೆ ದಾರಿ ದೀಪವಾಗಿದ್ದಾರೆ ಎಂದು ಸಚಿವರು ಸ್ಮರಿಸಿದರು. ಕನ್ನಡದ ಪ್ರಥಮ ಶಿಲಾ ಶಾಸನವಾದ ಹಲ್ಮಿಡಿ ಶಾಸನ ದೊರೆತಿರುವುದು ಇಲ್ಲಿಯೆ, ದೇಶದ ಪ್ರಧಾನಿಯಾಗಿದ್ದ ಹೆಚ್.ಡಿ.ದೇವೇಗೌಡರು, ಡಾ. ಎಸ್.ಎಲ್.ಭೈರಪ್ಪ, ಅ.ನ.ಕೃ, ಎಸ್.ಕೆ.ಕರೀಂಖಾನ್, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾಯರು, ಶಾರದಾ ಪ್ರಸಾದ್, ಹರ‍್ನಳ್ಳಿ ರಾಮಸ್ವಾಮಿ, ಕಿ.ರಂ ನಾಗರಾಜ್, ಕ್ಯಾ.ಗೋಪಿನಾಥನ್, ಗರುಡನಗಿರಿ ನಾಗರಾಜ್, ಜಾವಗಲ್ ಶ್ರೀನಾಥ್, ಪ್ಯಾರಾ ಒಲಂಪಿಕ್ ಚಾಂಪಿಯನ್ ಗಿರೀಶ್ ಮುಂತಾದ ಅನರ್ಘ್ಯ ರತ್ನಗಳು ಈ ಜಿಲ್ಲೆಯಲ್ಲಿ ಜನಿಸಿರುವುದು ಹೆಮ್ಮೆಯ ವಿಷಯ ಎಂದರು.

11 ಜೀವ ಹಾನಿ:
ಈ ವರ್ಷವೂ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಜೀವ , ಬೆಳೆ, ಮನೆ, ರಸ್ತೆ, ಸಾರ್ವಜನಿಕ ಕಟ್ಟಡ ಹಾಗೂ ಕೆರೆ ಕಟ್ಟೆಗಳಿಗೆ ಹಾನಿಯಾಗಿದೆ. ನಿಯಮಾನುಸಾರ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೆರೆ ಮತ್ತು ರಸ್ತೆಗಳ ಶೀಘ್ರ ದುರಸ್ತಿಗೆ ನಿರ್ದೇಶನ ನೀಡಲಾಗಿದೆ. ಕಳೆದ ಜೂನ್ ನಿಂದ ಅಕ್ಟೋಬರ್ ಮೂರನೇ ವಾರದವರೆಗೂ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದರು.


3262 ಮನೆಗೆ ಹಾನಿ:


ಅತಿವೃಷ್ಟಿಯಿಂದ ಒಟ್ಟಾರೆ 3262 ಮನೆಗಳು ವಿವಿಧ ಸ್ವರೂಪದಲ್ಲಿ ಹಾನಿಗೀಡಾಗಿದ್ದು, ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಕಾಫಿ ಬೆಳೆ ಸೇರಿ ಒಟ್ಟು 12004.51 ಹೆಕ್ಟೇರ್ ಬೆಳೆ ಹಾನಿಯಾಗಿದ್ದು 66,941 ಫಲಾನುಭವಿಗಳಿಗೆ 102.94 ಕೋಟಿ ರೂ.ಗಳ ಅನುದಾನವನ್ನು ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ ಎಂದರು.


ಮನೆ ಹಾನಿ ನಿರ್ವಹಣೆ ಮೂಲಭೂತ ಸೌಕರ್ಯಗಳ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಒಟ್ಟು 27.93 ಕೋಟಿ ರೂ.ಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಗೊಳಿಸಲಾಗಿದೆ ಎಂದು ವಿವರಿಸಿದರು.
2022-23ನೇ ಸಾಲಿನ ಆಯವ್ಯಯದಲ್ಲಿ ಹಾಸನ, ಅರಕಲಗೂಡು ಹಾಗೂ ಹೊಳೆನರಸೀಪುರಗಳಲ್ಲಿ ತಲಾ 100 ಸಂಖ್ಯಾಬಲದ ಕನಕದಾಸ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಿರ್ಮಿಸಲು ತಲಾ 3.26 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡುತ್ತಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮ ದಡಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 130 ಸಂಸ್ಥೆಗಳಿಗೆ 32 ಕೋಟಿ ರೂ.ಮಂಜೂರು ಮಾಡಿ ಈವರೆಗೆ ಒಟ್ಟು 26 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ನಳ ಸಂಪರ್ಕ ಕಾಮಗಾರಿಗೆ 2 ಹಂತಗಳಲ್ಲಿ 838 ಕಾಮಗಾರಿ ಗುರಿ ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ ಒಳಗೆ 759 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದ ಅವರು, ಬಹುಗ್ರಾಮ ಕುಡಿಯವ ನೀರು ಸರಬರಾಜು ಯೋಜನೆಯಡಿ ಜಿಲ್ಲೆಗೆ ಒಟ್ಟು 1166.92 ಕೋಟಿಗೆ ಅನುಮೋದನೆ ನೀಡಲಾಗಿದೆ ಎಂದರು.


ಬಾಕ್ಸ್
ಮೂರು ಹೆಚ್ಚುವರಿ ಗೋಶಾಲೆ:


ಜಿಲ್ಲೆಗೆ ಹೆಚ್ಚುವರಿಯಾಗಿ ಮೂರು ಗೋಶಾಲೆ ತೆರೆಯಲು ಅನುಮೋದನೆ ನೀಡಲಾಗಿದೆ. ಚನ್ನರಾಯಪಟ್ಟಣ ತಾಲೂಕು ಅಮೃತ್ ಮಹಲ್ ತಳಿ ಸಂವರ್ಧನ ಉಪಕೇಂದ್ರ, ರಾಯಸಮುದ್ರ ಕಾವಲಿನ 25 ಎಕರೆ ಜಮೀನಿನಲ್ಲಿ 50 ಲಕ್ಷ ಅನುದಾನದಲ್ಲಿ ಹಾಗೂ ಬೇಲೂರು ತಾಲೂಕಿನ ಸಿದ್ದಾಪುರ ಗ್ರಾಮದ 9.38 ಎಕರೆ ಜಮೀನಲ್ಲಿ ಗೋಶಾಲೆ ನಿರ್ಮಾಣ ಮಾಡಲು ಕ್ರಮವಹಿಸಲಾಗಿದ್ದು, ಮತ್ತೊಂದು ಗೋಶಾಲೆಯನ್ನು ಅರಕಲಗೂಡು ತಾಲೂಕಿನಲ್ಲಿ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
 
ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು
75 ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಅಮೃತ ಗ್ರಾಪಂ ಯೋಜನೆಯಡಿ 33 ಗ್ರಾಪಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 396 ವಿವಿಧ ಕಾಮಗಾರಿ ಹಮ್ಮಿ ಕೊಳ್ಳಲಾಗಿದೆ. ಇದುವರೆಗೆ 218 ಕಾಮಗಾರಿ ಪೂರ್ಣ ಗೊಂಡಿದ್ದು, ಶೇ.55 ರಷ್ಟು ಪ್ರಗತಿ ಸಾಧಿಸಲಾಗಿದೆ.
-ಗೋಪಾಲಯ್ಯ, ಉಸ್ತುವಾರಿ ಸಚಿವ

ಕಸಾಪದಲ್ಲಿ ಕನ್ನಡ ರಾಜ್ಯೋತ್ಸವ

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಹಾಗೂ ಧ್ವಜಾರೋಹಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಸಲಹೆಗಾರರಾದ ಡಾ.ಡಿ.ಜಿ. ಕೃಷ್ಣೇಗೌಡ, ಡಾ.ಹಂಪನಹಳ್ಳಿ ತಿಮ್ಮೇಗೌಡ, ಡಾ.ನಾರಾಯಣ್, ಗೌರವ ಕಾರ್ಯದರ್ಶಿಗಳಾದ ಜಾವಗಲ್ ಪ್ರಸನ್ನಕುಮಾರ್, ಬಿ.ಆರ್.ಬೊಮ್ಮೇಗೌಡ, ಕೋಶಾಧ್ಯಕ್ಷ ಜಯರಾಂ, ಗೃಹ ನಿರ್ಮಾಣ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಕೆ.ಎಂ, ರೋಟರಿ ಕ್ಲಬ್ ಆಫ್ ಕ್ವಾಂಟಾ ಅಧ್ಯಕ್ಷ ಎಂ.ಪಿ. ಚಂದ್ರಶೇಖರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಸನ ಯೋಜನಾಧಿಕಾರಿ ನವೀನ್, ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು. ಇದೇ ವೇಳೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶೌರ್ಯ ತಂಡ ಹಾಗೂ ಯೋಜನೆಯ ಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ.ಐಚನಹಳ್ಳಿ ಕೃಷ್ಣಪ್ಪ ಅವರನ್ನು ಪರಿಷತ್ತಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here