ಹಾಸನ ಜಿಲ್ಲೆಯಲ್ಲಿ ಜ.17 ರಿಂದ ಪಲ್ಸ್ ಪೊಲಿಯೋ ಲಸಿಕಾ 💧 ಕಾರ್ಯಕ್ರಮ: ಜಿಲ್ಲಾಧಿಕಾರಿ ಆರ್.ಗಿರೀಶ್

0

ಹಾಸನ ಜಿಲ್ಲೆಯಲ್ಲಿ ಜ.17 ರಿಂದ 20 ರವರೆಗೆ ಪಲ್ಸ್ ಪೊಲಿಯೋ ಲಸಿಕಾ ಕಾರ್ಯ ನಡೆಯಲಿದ್ದು 0 ಯಿಂದ 5 ವರ್ಷದೊಳಗಿನ  ಯಾವುದೇ ಮಗು ಈ ಯೋಜನೆಯಿಂದ ಕೈ ಬಿಟ್ಟು ಹೋಗದಂತೆ ಮುತುವರ್ಜಿವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
      ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪೋಲಿಯೋ ರೋಗವನ್ನು ದೇಶದಿಂದ ಮುಕ್ತಗೊಳಿಸಲು ಹಮ್ಮಿಕೊಂಡಿರುವ  ವಿಶೇóಷ ಲಸಿಕಾ ಆಂದೋಲನವನ್ನು ಹೆಚ್ಚಿನ ಜಾಗೃತಿಯಿಂದ ಯಶಸ್ವಿಗೊಳಿಸಬೇಕು ಹಾಗೂ ಇತರ ಸಾಮಾನ್ಯ ಲಸಿಕಾ ಕಾರ್ಯಗಳೂ  ಕಾಲಕಾಲಕ್ಕೆ ನಡೆಯಬೇಕು ಎಂದರು.
     ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ಗುರುತಿಸಲ್ಪಟ್ಟ ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ  ಲಸಿಕೆ ಹಾಕಬೇಕು ಹಾಗೂ ಆನಂತರದ 2-3 ದಿನಗಳ ಕಾಲ ಪ್ರತಿ ಮನೆ ಮನೆಗೂ ಭೇಟಿ ನೀಡಿ ಯಾವುದೇ ಮಗು ಕೈ ಬಿಟ್ಟು ಹೋಗದೆ ಖಾತರಿ ಪಡಿಸಿಕೊಳ್ಳಬೇಕು ಎಂದರು.
    ಬಸ್ ನಿಲ್ದಾಣ, ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಟ್ರಾಸಿಟ್ ತಂಡಗಳನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು. 
    ಸಮಸ್ಯಾತ್ಮಕ ಎಂದು ಪರಿಗಣಿಸಲ್ಪಟ್ಟಿರುವ ಸ್ಥಳಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು, ಕಾಫಿ ತೋಟಗಳಲ್ಲಿರುವ ಕೂಲಿಕಾರರು, ಹಾಗೂ ಶೆಡ್‍ಗಳಲ್ಲಿ ವಾಸಿಸುವ ಇತರ ಕಾರ್ಮಿಕರ ಮಕ್ಕಳ ಬಗ್ಗೆ  ನಿಗಾವಹಿಸಿ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
         ಅವಶ್ಯಕತೆಯಿರುವ ಶುಶ್ರೂಷಕ ವಿದ್ಯಾರ್ಥಿಗಳನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿಸುವುದು. ಹಾಗೂ ಕಮ್ಯೂನಿಟಿ ಮೆಡಿಸನ್ ವಿಭಾಗದ ಒಬ್ಬರು ತಜ್ಞರನ್ನು 4ದಿನಗಳ ಮೇಲ್ವೀಚಾರಣಗೆ ನಿಯೋಜಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

       ಲಸಿಕೆಯನ್ನು ಶೀತಲ ಸರಪಳಿಯಲ್ಲಿಡಬೇಕಾಗಿರುವುದರಿಂದ ಜ.15 ರಿಂದ 21 ರವರೆಗೆ ನಿರಂತರ ವಿದ್ಯುತ್ ಪೂರೈಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಆರ್. ಗಿರೀಶ್ ಸೂಚಿಸಿದರು.
     ಪ್ರತಿ ತಾಲ್ಲೂಕು ತಹಶೀಲ್ದಾರ್‍ರವರ ಅಧ್ಯಕ್ಷತೆಯಲ್ಲಿ ಚಾಲನಾ ಸಮಿತಿ ಸಭೆ ನಡೆಸಲು ಕ್ರಮ ವಹಿಸುವಂತೆ ಅವರು ಹೇಳಿದರು.
     ರೈಲ್ವೆ ಪ್ಲಾಟ್‍ಫಾರಂ, ಬಸ್ ನಿಲ್ದಾಣದಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲು ಅನುಕೂಲ ಮಾಡಿಕೊಡುವುದು ಹಾಗೂ ಈ ಲಸಿಕಾ ಕೇಂದ್ರಗಳು ಕಾರ್ಯಕ್ರಮದ ದಿನಗಳಲ್ಲಿ 24 ಗಂಟೆಯು ತೆರಯುವಂತೆ ವ್ಯವಸ್ಥೆ ಮಾಡುವುದು, ಎಲ್ಲಾ ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳಲ್ಲಿ ಟಿವಿಗಳಲ್ಲಿ ಕಾರ್ಯಕ್ರಮದ ಬಗ್ಗೆ ನಿರಂತರವಾಗಿ ಬಿತ್ತರಿಸುತ್ತಿರಬೇಕು ಹಾಗೂ ಧ್ವನಿವರ್ಧಕಗಳ ಮುಖಾಂತರ ಪ್ರಚಾರ ಮಾಡಬೇಕು  ಎಂದು ಜಿಲ್ಲಾಧಿಕಾರಿ ತಿಳಿಸಿದರು.
     ಆರ್ ಹೆಚ್. ಅಧಿಕಾರಿ ಡಾ. ಕಾಂತರಾಜ್ ಕೆ.ಪಿ. ಅವರು ಮಾತನಾಡಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಜಿಲ್ಲೆಯಲ್ಲಿ 1,30,105  ಮಕ್ಕಳಿದ್ದು  ಅವರಿಗೆ ಲಸಿಕೆ ಹಾಕುಲು  871 ಬೂತ್ ಗಳನ್ನು ಸ್ಥಾಪಿಸಲಾಗುವುದು   23 ಟ್ರಾಸಿಟ್ ತಂಡಗಳು, 9 ಸಂಚಾರಿ ತಂಡಗಳು, 3546 ಲಸಿಕೆ ಹಾಕುವವರು, 185 ಮೇಲ್ವಿಚಾರಕರು  ಕಾರ್ಯ ನಿರ್ವಸಲಿದ್ದಾರೆ ಎಂದು ಹೇಳಿದರು.
    ಇದೇ ವೇಳೆ ಕೋವಿಡ್ 19 ಕಡಿಮೆಯಾಯಿತೆಂದು ನಿರ್ಲಕ್ಷ್ಯ ಮಾಡಬಾರದು ಮನೆಯಲ್ಲೆ ಇದ್ದು ಚಿಕೆತ್ಸೆ ಪಡೆಯುತ್ತಿರುವವರ ಬಗ್ಗೆ ವಿಶೇಷ ಗಮನ ಹರಿಸಿ ನಿರಂತರವಾಗಿ ಮಾಹಿತಿ ಪಡೆಯುತ್ತಿರಿ ಬಹುರೂಪದ ಆರೋಗ್ಯ ಸಮಸ್ಯೆ ಇರುವ ಶಂಕಿತ ಸೋಂಕಿತರನ್ನು ಪರೀಕ್ಷಾ ವರದಿ ಬರುವವರೆಗೆ ಆಸ್ಪತ್ರೆಯಲ್ಲಿಯೇ ಇರಿಸಿ ಚಿಕಿತ್ಸೆ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
      ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಾಲ್ಲೂಕು ವೈದ್ಯಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here