ಮಂಜರಾಬಾದ್ ಕೋಟೆ ಸ್ವಚ್ಛತಾ ಕಾರ್ಯ: ವಿವಿದ ಸಂಘಟನೆಗಳ ಸಹಯೋಗ : ಸಕಲೇಶಪುರ:
ಕಂದಾಯ ಇಲಾಖೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಆನೇಮಹಲ್ ಗ್ರಾಮ ಪಂಚಾಯತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ಟಿಪ್ಪು ಸುಲ್ತಾನ್ ನಿರ್ಮಿತ ಮಂಜರಾಬಾದ್ ಕೋಟೆ ಸ್ವಚ್ಚತಾ ಕಾರ್ಯ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಪ್ರತೀಕ್ ಭಾಯಲ್, ಸ್ವಚ್ಛತಾ ಆಂದೋಲನ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಮಂಜರಾಬಾದ್ ಕೋಟೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಕಲೇಶಪುರದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ ಇವುಗಳನ್ನು ಸಂರಕ್ಷಿಸಿಕೊಳ್ಳುವುದು ಹಾಗೂ ಸ್ವಚ್ಛವಾಗಿಡುವುದು ನಮ್ಮಗಳ ಕರ್ತವ್ಯವಾಗಿದೆ ಎಂದರು.
ಇಲ್ಲಿಯ ಜನರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪರಿಸರಕ್ಕೆ ಪೂರಕವಾಗಿ ಜೀವನ ಸಾಗಿಸಬೇಕೆಂದು ಕರೆ ನೀಡಿದರು. ತಹಸೀಲ್ದಾರ್ ಜಯಕುಮಾರ್ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮ ಕರ್ತವ್ಯ ವಾಗಿದೆ.
ಸಮಾಜದಲ್ಲಿ ಅರಿವು ಮೂಡಿಸುವ ಹಾಗೂ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ್ ರಕ್ಷಿದಿ, ಕಾರ್ಯದರ್ಶಿ ರವಿಕುಮಾರ್, ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಮೀನಾಕ್ಷಿ ಖಾದರ್, ಕಾರ್ಯದರ್ಶಿ ಹರೀಶ್ ಮಂಜು, ಗ್ರಾಮ ಪಂಚಾಯತಿ ಸದಸ್ಯ ಹಸೈನಾರ್ ಆನೆಮಹಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.