ಮೂರು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ ಸಕಲೇಶಪುರದ ದೋಣಹಳ್ಳಿ ತಾತ್ಕಾಲಿಕ ಸೇತುವೆ ಕುಸಿತ

0

ಹಾಸನ / ಸಕಲೇಶಪುರ : ಮೂರು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ
ಸಕಲೇಶಪುರ: ತಾಲ್ಲೂಕಿನಾಧ್ಯಂತ ಬುಧವಾರ ಇಡೀ ದಿನ ಧಾರಾಕಾರವಾಗಿ ಮಳೆಯಾಗಿದ್ದು,
ಹಾನುಬಾಳು ಸಮೀಪದ ದೋಣಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿ ಸೇತುವೆ ಕೊಚ್ಚಿಹೋಗಿದೆ.
ಪಶ್ಚಿಮಘಟ್ಟದ ಅಂಚಿನಲ್ಲಿ ಇರುವ ಬಿಸಿಲೆ, ಹೊಂಗಡಹಳ್ಳ, ಕಾಗಿನಹರೆ, ಹೆಗ್ಗದ್ದೆ, ಕಾಡಮನೆ, ದೇವಾಲದಕೆರೆ ಹಾನುಬಾಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ 6ರಿಂದ ಬುಧವಾರ ಸಂಜೆ ವರೆಗೆ  ಸರಾಸರಿ 150 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ಪಟ್ಟಣದ ಸುತ್ತಮುತ್ತ, ಬಾಳ್ಳುಪೇಟೆ, ಯಸಳೂರು, ಬ್ಯಾಕರವಳ್ಳಿ, ಸುಂಡೇಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಾಸರಿ 110 ಮಿ.ಮೀ. ಮಳೆಯಾಗಿದೆ.
ಕೊಚ್ಚಿಹೋದ ಸೇತುವೆ: ಹಾನುಬಾಳು ಹೋಬಳಿ ಕೇಂದ್ರದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಇರುವ ದೋನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ  ಬೆಣಗಿನ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಕಳೆದ ವರ್ಷದ ಮಳೆಗಾಲದಲ್ಲಿಯೇ ಭಾರೀ ಮಳೆಯಿಂದ ಕೊಚ್ಚಿಹೋಗಿತ್ತು. ಸರ್ಕಾರದಿಂದ ಬದಲಿ ಸೇತುವೆ ನಿರ್ಮಾಣ ಆಗಿರಲಿಲ್ಲ. ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರೆಲ್ಲಾ ಸೇರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ವೇಗವಾಗಿ ಹರಿಯುವ ನೀರಿನ ರಭಸಕ್ಕೆ ಈ ಸೇತುವೆ ಕೊಚ್ಚಿಹೋಗಿದೆ.
ಇದರಿಂದಾಗಿ ಗ್ರಾಮಸ್ಥರು ಹೊಳೆ ಆಚೆ ಇರುವಂತಹ ಜಮೀನುಗಳಿಗೆ ಹೋಗುವುದಕ್ಕೂ ಮಗಜಹಳ್ಳಿ, ಹಾನುಬಾಳು, ಅವರೇಕಾಡು ಮಾರ್ಗವಾಗಿ ಸುಮಾರು 13 ಕಿ.ಮೀ. ಬಳಸಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
ಮಳೆಗಾಲ ಮುಗಿದು ಹಳ್ಳದಲ್ಲಿ ನೀರಿನ ಹರಿವು ಕಡಿಮೆ ಆಗುವ ವರೆಗೂ ಈ ಸಮಸ್ಯೆ ತಪ‍್ಪಿದ್ದಲ್ಲ. ಸೇತುವೆ ಕೊಚ್ಚಿಹೋಗಿ ಒಂದು ವರ್ಷ ಕಳೆದರೂ ಸಹ ಹೊಸ ಸೇತುವೆ ನಿರ್ಮಾಣ ಮಾಡದೆ ಇದ್ದ ಪರಿಣಾಮ ಗ್ರಾಮಸ್ಥರು ಸಮಸ್ಯೆ ಎದುರಿಸಬೇಕಾಗಿದೆ.
ಪಟ್ಟಣದ ಕುಶಾಲನಗರ ಬಡಾವಣೆಯ  ಶಫಿ ಮನೆ ಮುಂಭಾಗದ ಕಾಂಪೌಂಡ್‌ ಕುಸಿದು ಬಿದ್ದಿದೆ.
ಅಂಗಳದ ಮೇಲ್ಚಾವಣಿಯ ಕಂಬ ಸಹ ಬಿದ್ದಿದ್ದು ಮೇಲ್ಚಾವಣಿ ಹಾನಿಯಾಗಿದೆ.
ವಿದ್ಯುತ್‌ ವ್ಯತ್ಯಯ: ಮೂರು ದಿನಗಳಿಂದ ಭಾರೀ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಮರಗಳು ವಿದ್ಯುತ್‌ ಮಾರ್ಗದ ಮೇಲೆ ಬಿದ್ದು, ವಿದ್ಯುತ್‌ ಕಂಬಗಳು ತುಂಡಾಗಿವೆ. ಇದರಿಂದಾಗಿ ಹಲವು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದೆ ಎರಡು ದಿನಗಳಿಂದ ಕತ್ತಲೆಯಲ್ಲಿವೆ

– ಭೀಮ ವಿಜಯ ಸಕಲೇಶಪುರ

LEAVE A REPLY

Please enter your comment!
Please enter your name here