” ಕೋವಿಡ್ !! ಎಲ್ಲಾ ರೀತಿಯ ಮುಂಜಾಗೃತ ಕ್ರಮದೊಂದಿಗೆ ,ಜ.1 ರಿಂದ 10ಮತ್ತು 12 ತರಗತಿಗಳು , ವಿದ್ಯಾಗಮ ಕಾರ್ಯಕ್ರಮ ಹಾಸನದಲ್ಲಿ ಪುನರಾರಂಭ‌” – ಜಿಲ್ಲಾಧಿಕಾರಿ ಆರ್ ಗಿರೀಶ್

    0

    ಹಾಸನ ಡಿ.28 (ಹಾಸನ್_ನ್ಯೂಸ್) ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಜ.5 ರಿಂದ 10ಮತ್ತು 12 ತರಗತಿಗಳು ಹಾಗೂ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದು ಎಲ್ಲಾ ರೀತಿಯ ಮುಂಜಾಗೃತ ಕ್ರಮದೊಂದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
       
          ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಿ.ಭಾರತಿ ಅವರೊಂದಿಗೆ ಸುದ್ಧಿಗೋಷ್ಠಿ ನಡೆಸಿದ ಅವರು ಶಾಲೆಗಳ ಆರಂಭ ಮತ್ತು ವಿದ್ಯಾಗಮ ಆರಂಭದ ಬಗ್ಗೆ ಮಾಹಿತಿ ನೀಡಿದರು.
       
          ಎಲ್ಲಾ ಶಾಲೆಗಳ ಶಿಕ್ಷಕರ ಅಥವಾ  ಸಿಬ್ಬಂದಿ ವರ್ಗದವರು ಶಾಲೆ ಪ್ರಾರಂಭವಾಗುವ ದಿನದ ಮುನ್ನ 72 ಗಂಟೆಗಳ ಮೊದಲು ಕೋವಿಡ್-19 ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿಯನ್ನು ತರುವಂತೆ ತಿಳಿಸಿಲಾಗಿದೆ ಪ್ರತಿ ಶಾಲೆಗೆ ಒಂದು ನೋಡಲ್ ಅಧಿಕಾರಿಯನ್ನು ಗುರುತಿಸಿ ಮಾಪಿಂಗ್ ಮಾಡಲಾಗಿದೆ.
        
         ಜನವರಿ 1 ರಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 6ರಿಂದ 9 ನೇ ತರಗತಿಯ ಮಕ್ಕಳಿಗೆ ಪರ್ಯಾಯ ದಿನಗಳಂದು  ವಿದ್ಯಾಗಮ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ ಮತ್ತು ಈ ಅನುಭವದ ಆಧಾರದಮೇಲೆ  ಜ 14ರ ನಂತರ 1 ರಿಂದ 5ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಇದಕ್ಕೆ ಸಂಬಂಧಿಸಿದ ವೇಳಾ ಪಟ್ಟಿಯನ್ನು ಈಗಾಗಲೇ ಎಲ್ಲಾ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾದಿಕಾರಿ ತಿಳಿಸಿದರು.
        
         ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ತರಗತಿಗಳನ್ನು ಪ್ರಾರಂಭಮಾಡಲಾಗುವುದು ಹಾಗೂ ಶಾಲೆಗೆ ಹಾಜರಾಗಲು ಬಯಸದೇ ಇರುವ ಮಕ್ಕಳಿಗೆ ತರಗತಿಗೆ ಹಾಜರಾಗುವುದು ಕಡ್ಡಾಯವಾಗಿರುವುದಿಲ್ಲ ಅಂತಹ ಮಕ್ಕಳಿಗೆ ಈಗ ಅನುಸರಿಸುತ್ತಿರುವ ಆನ್ ಲೈನ್ ಮತ್ತು ಇತರೆ ಪರ್ಯಾಯ ವಿಧಾನಗಳನ್ನು ಅನುಸರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
        
           ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿಯವರೆಗೆ ಒಟ್ಟು 2,16,960 ಮಕ್ಕಳು 2020-21 ನೇ ಸಾಲಿನಲ್ಲಿ ದಾಖಲಾಗಿದ್ದು, ಇದರಲ್ಲಿ 21,874 ಮಕ್ಕಳು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 14,700 ಮಕ್ಕಲು ಮನೆಯಲ್ಲಿ ಟಿ.ವಿ ಸೌಲಭ್ಯವನ್ನು ಹೊಂದಿದ್ದು, ಚಂದನವಾಹಿನಿಯಲ್ಲಿ ಪ್ರಸಾರವಾಗುವ ಸಂವೇದ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದ್ದಾರೆ. 10,872 ಮಕ್ಕಳು ಇಂಟರ್‍ನೆಟ್ ಸೌಲಭ್ಯವುಳ್ಳ ಮೊಬೈಲ್ ದೂರವಾಣಿ ಹೊಂದಿದ್ದು, ಇವರುಗಳು ಆನ್ ಲೈನ ಶಿಕ್ಷಣವನ್ನು ಈಗಾಗಲೇ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
          
         ಜಿಲ್ಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 21,874 ಮಕ್ಕಳಲ್ಲಿ 27 ಮಕ್ಕಳು ಬೇರೆ ಜಿಲ್ಲೆಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಾರೆ. ಇದಲ್ಲದೇ ಬೇರೆ ಜಿಲ್ಲೆಯ 21 ಮಕ್ಕಳು ಹಾಸನ ಜಿಲ್ಲಿಯ 10 ನೇ ತರಗತಿಗೆ ಶಿಕ್ಷಣ ಸೌಲಭ್ಯ ಪಡೆಯುತ್ತಾರೆ ಎಂದು ಆರ್. ಗಿರೀಶ್ ಹೇಳಿದರು.
        

         ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಿ.ಭಾರತಿ ಅವರು ಮಾತನಾಡಿ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರಕ್ಕೆ ಅನುಮತಿ ನೀಡಿದ ನಂತರ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಹಾಗೂ  10 ನೇ ತರಗತಿಯನ್ನು ಬೆಳಗಿನ ಅರ್ಧ ದಿನ ಬೆಳಿಗ್ಗೆ 10 ಗಂಟೆಯಿಂದ 12.30 ರವರೆಗೆ 45 ನಿಮಿಷಗಳ 3 ಅವಧಿಗಳಲ್ಲಿ ನಡೆಸಲಾಗುವುದು ಮದ್ಯಾಹ್ನದ ನಂತರ ಇನ್ನೊಂದು ಬ್ಯಾಚ್ ತರಗತಿಗಳು ನಡೆಯುತ್ತವೆ

            ಪ್ರತಿ ಶಾಲೆಯ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುವುದು ಹಾಗೂ ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸುವುದು ಹಾಗೂ ಭೌತಿಕ ಅಂತರವನ್ನು ಕಾಪಾಡಿ ಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಡಿ. ಭಾರತಿ ತಿಳಿಸಿದರು.
      
       
    ಗುಣಾಧರಿತ ನಿರ್ವಹಣಾ ಪದ್ಧತಿ ಅನುಸಾರ ಎಲ್ಲಾ ಶಾಲೆಗಳಲ್ಲಿ ಸ್ಯಾನಿಟೈಸರ್ ಸೋಪು ಮತ್ತು ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಲಾಗುವುದು ಸ್ಯಾನಿಟೈಸರ್ ವ್ಯವಸ್ಥೆಗೆ ಗ್ರಾಮಪಂಚಾಯಿತಿ ಹಾಗೂ ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಲಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಣಾದಿಕಾರಿ  ಹೇಳಿದರು.

          ಡಿ. 24 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಶಾಲಾ ಪ್ರಾರಂಭಕ್ಕೆ ಸಂಬಂಧಿಸಿದಂತೆ ಜವಾಬ್ದಾರಿ ನೀಡಿ ಸಹಕರಿಸುವಂತೆ ತಿಳಿಸಲಾಗಿದ್ದು ಡಿ. 24 ರಂದು ತಾಲೂಕು ಮಟ್ಟದಲ್ಲಿ ಸಂಬಂಧಿಸಿದಂತೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗಿದ್ದು, ಡಿಸೆಂಬರ್ 26 ಮತ್ತು 28ರಂದು ಪ್ರತಿ ಶಾಲೆಯಲ್ಲಿ ಎಸ್.ಎಂ.ಡಿ.ಸಿ ಹಾಗೂ ಪೋಷಕರ ಸಭೆ ನಡೆಸಿ ಅವರಿಗೆ ಅರಿವು ಮೂಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಡಿ. ಭಾರತಿ ಮಾಹಿತಿ ನೀಡಿದರು.
       
         ಜ.1 ರಿಂದ 10 ಮತ್ತು 12ನೇ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು  ಈ ಅನುಭವದ ಆಧಾರದ ಮೇಲೆ ಜ. 15 ರಿಂದ 11 ನೇ ತರಗತಿಗಳನ್ನು ಪ್ರಾರಂಭಿಸಲಾಗುವುದು ಆರಂಭಕ್ಕೆ ಎಲ್ಲಾ ತರಹದ ಮುಂಜಾಗೃತ ಕ್ರಮದ ಮೂಲಕ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

       ಡಿ. 28, 29 ಮತ್ತು 30ರಂದು ಎಲ್ಲಾ ಶಾಲೆಗಳಲ್ಲೂ ಶಾಲಾ ಶೌಚಾಲಯ, ಕುಡಿಯುವ ನೀರಿನ ಪರಿಕರಗಳು ಕೊಠಡಿಗಳು ಹಾಗೂ ಶಾಲಾ ಆವರಣವನ್ನು ಸ್ವಚ್ಛಗೊಳಿಸುವಂತೆ ತಿಳಿಸಲಾಗಿದೆ.

         ಪ್ರತಿ ಪ್ರೌಢಶಾಲೆಗೂ ತಾಲ್ಲೂಕು ಮಟ್ಟದ ಬಬ್ಬರು ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅವರು ಡಿ.29, 30 ಮತ್ತು 31 ರಂದು ತಮಗೆ ವಹಿಸಿದ ಶಾಲೆಗೆ ಭೇಟಿ ನೀಡಿ ಶಾಲಾ ಸಿದ್ಧತೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ವ್ಯವಸ್ಥೆ ಮಾಡಿದೆ ಡಿ.ಭಾರತಿ ಹೇಳಿದರು.

        ಮದ್ಯಾಹ್ನ ಉಪಹಾರ ಯೋಜನೆಯಡಿ ಬಿಸಿ ಊಟ ಬದಲು ಆಹಾರ ಧಾನ್ಯಗ:ಳನ್ನು ವಿತರಿಸಲಾಗುವುದು ಮತ್ತು ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರನ್ನು ತರುವಂತೆ ತಿಳಿಸಿದೆ ಹಾಗೂ ಶಾಲೆಯಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ತಿಳಿಸಿದರು.
       
         ಯಾವುದೇ ವಿದ್ಯಾರ್ಥಿಗೆ ಕೋವಿಡ್-19 ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡುವಂತೆ ಮತ್ತು ಕೂಡಲೇ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಸಮನ್ವಯ ಸಾಧಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಸಿ.ಇ.ಓ ರವರು ಹೇಳಿದರು

       
         10 ನೇ ತರಗತಿಗೆ ಸಾಮಾನ್ಯ ತರಗತಿ ಮತ್ತು 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳಲ್ಲಿ ಪ್ರತಿ ಗುಂಪಿನಲ್ಲಿ ಗರಿಷ್ಠ 15 ರಿಂದ 20 ಮಕ್ಕಳು ಮಾತ್ರ ಇರುವಂತೆ ಗುಂಪು ರಚಿಸಲು ತಿಳಿಸಿದೆ ಹಾಗೂ ಈ ವಿದ್ಯಾಗಮ ಕಾರ್ಯಕ್ರಮವನ್ನು ಅಗತ್ಯಕ್ಕನುಗುಣವಾಗಿ ಶಾಲಾ ಆವರಣದಲ್ಲೇ ನಡೆಸಲು ತಿಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಹೇಳಿದರು.    

    LEAVE A REPLY

    Please enter your comment!
    Please enter your name here