ಸಿಡ್ನಿ: ಇಂದು ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಏಕದಿನ ಸರಣಿಯನ್ನ ತನ್ನದಾಗಿಸಿಕೊಂಡಿದೆ. ಮೂರು ಪಂದ್ಯಗಳಲ್ಲಿ ಎರಡನ್ನ ಆಸೀಸ್ ಬಳಗ ಗೆದ್ದಿದ್ದು, ಕೊನೆಯ ಮ್ಯಾಚ್ ಬಾಕಿ ಉಳಿದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆಸ್ಟ್ರೇಲಿಯಾ 398 ರನ್ ಕಲೆ ಹಾಕಿತ್ತು.
ಬೃಹತ್ ಮೊತ್ತವನ್ನ ಬೆನ್ನಟ್ಟಿದ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 338 ರನ್ ಕಲೆ ಹಾಕಿ 51 ರನ್ ಗಳ ಅಂತರದಿಂದ ಸೋಲನ್ನ ಒಪ್ಪಿಕೊಂಡಿತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ವೃತ್ತಿಜೀವನದ 59ನೇ ಅರ್ಧ ಶತಕ ದಾಖಲಿಸಿದರು. ಜಾಶ್ ಹೇಝಲ್‍ವುಡ್ ಬೌಲಿಂಗ್ ನಲ್ಲಿ ಮೊಯ್ಸೆಸ್ ಹೆನ್ರಿಕ್ಸ್ ಗೆ ಕ್ಯಾಚ್ ನೀಡಿ ಔಟಾದ್ರು. ಇತ್ತ ಕೆ.ಎಲ್.ರಾಹುಲ್ ಒನ್ ಡೇ ಕೆರಿಯರ್ ನ 8ನೇ ಅರ್ಧಶತಕ ದಾಖಲಿಸಿ ಆಡಮ್ ಝಾಂಪ ಬಾಲ್ ನಲ್ಲಿ ಔಟ್ ಆದ್ರು.
ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ (30) ಮತ್ತು ಮಯಾಂಕ್ ಆಗರ್ವಾಕಲ್ (28) ಜೊತೆಯಾಟದಲ್ಲಿ 58 ರನ್ ಪೇರಿಸಿ ಪಂದ್ಯಕ್ಕೆ ಉತ್ತಮ ಆರಂಭ ನೀಡಿದ್ದರು. ಪ್ಯಾಟ್ ಕಮ್ಮಿನ್ಸ್ ಮೊದಲಿಗೆ ಅಗರ್ವಾಲ್ ಮತ್ತು ಶಿಖರ್ ಧವನ್ ವಿಕೆಟ್ ಪಡೆದರು. ನಂತರ ಬಂದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೊತೆಯಾಟದಲ್ಲಿ 98 ರನ್ ಸೇರಿಸಿದರು. ಅಯ್ಯರ್ ನಂತರ ಬಂದ ಕೆ.ಎಲ್.ರಾಹುಲ್ ಕ್ಯಾಪ್ಟನ್ ಕೊಹ್ಲಿಗೆ ಜೊತೆಯಾದ್ರು. ಈ ಇಬ್ಬರ ಆಟದಲ್ಲಿ 72 ರನ್ ತಂಡದ ಪಾಲಾಯ್ತು. ಕೊಹ್ಲಿ ಪೆವಿಲಿಯನ್ ಗೆ ತೆರಳಿದ ಬಳಿಕ ಜೊತೆಯಾದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಜೋಡಿ 63 ರನ್ ಸೇರಿಸಿತು. ಆದ್ರೆ ಗೆಲುವು ಆಸ್ಟ್ರೇಲಿಯಾದ ಪಾಲಾಯ್ತು.