ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಸನದಲ್ಲಿ ಇಂದು

0

ಹಾಸನ,ಅ.20 :  ರಾಮಾಯಣದಲ್ಲಿ ಬಿಂಬಿತವಾಗಿರುವ ಹಲವಾರು ಅಂಶಗಳು ಸಮಾಜದ ಏಳಿಗೆಗೆ ಪೂರಕವಾಗಿ ದಾರಿದೀಪವಾಗಿದೆ ಎಂದು   ಶಾಸಕರಾದ ಪ್ರೀತಂ ಜೆ. ಗೌಡ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿಂದು ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ ಹಾಗೂ ಸಮಾಜಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ರಾಮಾಯಣ ರಚಿಸಿದ ವಾಲ್ಮೀಕಿಯವರ ಜೀವನ ಕುರಿತು ಅನೇಕ ರೀತಿಯ ಉಲ್ಲೇಖಗಳಿವೆ, ಆದರೆ ಅದರ ವಾಸ್ತವಿಕತೆಯನ್ನು ಅರಿಯಲು  ಪ್ರಯತ್ನಿಸಬೇಕು ಎಂದರು.
ಸುಮಾರು 24,000 ಶ್ಲೋಕಗಳು ಹಾಗೂ 6 ಖಂಡಗಳನ್ನು ಒಳಗೊಂಡಿರುವ ರಾಮಾಯಣ  ಮಹಾಕಾವ್ಯ ಪ್ರೀತಿ, ತ್ಯಾಗ, ಸಹನೆ, ಪ್ರಕೃತಿ ಸೌಂದರ್ಯ, ವಿರಹ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದು ಪ್ರೀತಂ ಜೆ. ಗೌಡ ತಿಳಿಸಿದರು.

ವಾಲ್ಮೀಕಿಯವರು ನಾರದರ ಮಾತಿಗೆ ಪ್ರೇರೇಪಿತರಾಗಿ ಸಾಂಸಾರಿಕ ಸಾಂಗತ್ಯವನು ತೊರೆದು, ತದೇಕಚಿತ್ತದಿಂದ ರಾಮ ಧ್ಯಾನವನ್ನು ಮಾಡಿ ಜ್ಞಾನವನ್ನು ಪಡೆದು ಇಂದಿಗೂ ಚಿರಸ್ಮರಣೀಯವಾಗಿರುವ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಅದೇ ರೀತಿ ಪ್ರತಿಯೊಬ್ಬರೂ ಸಹ ಸನ್ಮಾರ್ಗದಲ್ಲಿ ನಡೆದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಶಾಸಕರು ಹೇಳಿದರು.

ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಅವರು ಮಾತನಾಡಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಸಮಾಜಿಕ, ರಾಜಕೀಯ, ವೈಯುಕ್ತಿಕ ಜೀವನ ಹೀಗೆ ಹಲವಾರು ವಿಷಯಗಳ ಮೌಲ್ಯಗಳನ್ನು ಬಿಂಬಿಸುತ್ತದೆ. ಆದ್ದರಿಂದಲೇ ಈ ಕಾವ್ಯವು ಇಂದಿಗೂ ಪ್ರಸ್ತುತವಾಗಿರುವುದರ ಜೊತೆಗೆ ಸಮಾಜಕ್ಕೆ ಮಾದರಿಯಾಗಿ ಉಳಿದಿದೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ. ಡಿ. ಸುದರ್ಶನ್ ಅವರು ಮಾತನಾಡಿ ಒಬ್ಬ ವ್ಯಕ್ತಿಯು ಯಾವುದೇ ಹಿನ್ನೆಲೆ ಇದ್ದರೂ ಸಹ ಏಕಾಗ್ರತೆ ಹಾಗೂ ಶ್ರದ್ಧೆಯಿಂದ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿಯವರು ಸಾಕ್ಷಿಯಾಗಿದ್ದಾರೆ. ರಾಮಾಯಣ ಕಾವ್ಯದಲ್ಲಿ ವಾಲ್ಮೀಕಿಯವರು ಚಿತ್ರಿಸಿರುವ ನಿದರ್ಶನಗಳು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಜೀವನಕ್ಕೆ ಹೋಲುತ್ತವೆ. ಆದ್ದರಿಂದ ಆ ಮಹಾಕಾವ್ಯದಲ್ಲಿ ವ್ಯಕ್ತವಾಗಿರುವ ಸತ್ಯ, ಧೈರ್ಯ, ಸಹನೆ, ಕ್ಷಮೆ ಹೀಗೆ ಹಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್. ನಂದಿನಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ರಾಜ್ಯನೌಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೃಷ್ಣೆಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ವಿಶೇಷ ಭೂ ಸ್ವಾದೀನಾಧಿಕಾರಿ ಮಂಜುನಾಥ್, ವಾಲ್ಮೀಕಿ ಸಂಘದ ಅಧ್ಯಕ್ಷರಾದ ಮಹಂತಪ್ಪ, ಕಾರ್ಯದರ್ಶಿ ಧರ್ಮಪ್ಪ ನಾಯಕ, ದಲಿತ ಸಂಘದ ಮುಖಂಡರಾದ ಸಂದೇಶ, ಈರಪ್ಪ , ಹೆತ್ತೂರು ನಾಗರಾಜ್,  ಮತ್ತಿತರರು ಹಾಜರಿದ್ದರು

#valmikijayanti #hassan #hassannews

LEAVE A REPLY

Please enter your comment!
Please enter your name here