ಕೆರೆ ಸಂರಕ್ಷಣೆಗೆ ತುರ್ತು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

0

ನ್ಯಾಯಾಲಯದ ಸೂಚನೆಯಂತೆ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಕೆರೆಗಳ ಸಂರಕ್ಷಣೆ ಹಾಗೂ ಸಂಬಂದಪಟ್ಟಂತೆ ಇಲಾಖೆಗಳು, ನಗರ ಸ್ಥಳೀಯ ಸಂಸ್ಥೆಗಳು, ತುರ್ತು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ರವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಕೆರೆಗಳ ಸಂರಕ್ಷಣೆ ಕುರಿತು ಈವರೆಗಿನ ಪ್ರಗತಿ ಪರಿಶೀಲಾ ಸಭೆ ನಡೆಸಿದ ಅವರು ಎಲ್ಲಾ ಕೆರೆಗಳ ಸರ್ವೆ ಕಾರ್ಯವನ್ನು ಬೇಗನೆ ಮುಕ್ತಾಯಗೊಳಿಸಿ ಒತ್ತುವರಿ ತೆರವುಗೊಳಿಸಿ ಆಯಾಯ ಇಲಾಖೆಗಳ ವತಿಯಿಂದ ಬೇಲಿ ನಿರ್ಮಿಸುವ ಕಾರ್ಯ ನಡೆಯಬೇಕು ಎಂದರು.

ಈಗಾಗಲೇ ಸರ್ವೇ ಕಾರ್ಯ ನಡೆದು, ಒತ್ತುವರಿ ತೆರವುಗೊಂಡಿರುವ ಕೆರೆಗಳ ಪುನಶ್ಚೇತನ ಹಾಗೂ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಎರಡು ದಿನಗಳ ಒಳಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಪಂಚಾಯಿತಿ, ಸಣ್ಣ ನೀರಾವರಿ, ಬೃಹತ್ ನೀರಾವರಿ ಹಾಗೂ ಗ್ರಾಮ ಪಂಚಾಯ್ತಿ ಕೆರೆಗಳ ಸಂರಕ್ಷಣೆ ಹಾಗೂ ಅಬೀವೃದ್ಧಿ ಕುರಿತು ಈವರೆಗೆ ಪ್ರಗತಿ ಹಾಗೂ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಸಂಖ್ಯೆ ಹಾಗೂ ವಿಸ್ತೀರ್ಣ ಬಗ್ಗೆ ನಿಖರ ದಾಖಲೆ ಮತ್ತು ಮಾಹಿತಿ ಇರಿಸಿಕೊಳ್ಳಿ ತಾಲ್ಲೂಕುವಾರು ಪುನರ್ ಪರಶೀಲಿಸಿ ಎರಡು ದಿನಗಳೊಳಗಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸಿ ಎಂದು ಆರ್ ಗಿರೀಶ್ ಸೂಚಿಸಿದರು.


ಸಂಬಂಧಪಟ್ಟ ಎಲ್ಲಾ ಇಲಾಖೆಗಳು ತಮ್ಮ ಕೆರೆಗಳ ವಿವರವನ್ನು ಕೂಡಲೇ ಭೂ ದಾಖಲೆಗಳ ಉಪನಿರ್ದೇಶಕರಿಗೆ ಒದಗಿಸಿ ಗ್ರಾಮ ಪಂಚಾಯಿತಿ ಕೆರೆಗಳನ್ನು ಉದ್ಯೋಗ ಖಾತರಿ ಯೋಜನೆ ಬಳಸಿ ಹೂಳು ತೆಗೆದು ಅಭಿವೃದ್ಧಿ ಪಡಿಸಲು ಕ್ರಮ ವಹಿಸಿ ಎಂದರು.

ಎಲ್ಲಾ ಇಲಾಖೆಗಳು ಪರಿಣಿತಿ ಹೊಂದಿರುವ ಖಾಸಗಿ ಸರ್ವೆಯರ್ ಗಳನ್ನು ಬಳಸಿ ಸರ್ವೆ ಮಾಡಿಸಬಹುದಾಗಿದೆ ಡಿ.ಡಿ.ಎಲ್.ಆರ್ ಅವರೊಂದಿಗೆ ಸಮನ್ವಯ ಸಾಧಿಸಿ ತುರ್ತಾಗಿ ಕ್ರಮವಹಿಸಿ ಎಂದರು.
ಉಚ್ಚ ನ್ಯಾಯಾಲಯದ ಸೂಚನೆಯಂತೆ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ನಿರ್ಲಕ್ಷ್ಯ ತೋರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡ ಕೂಡಲೇ ಕೆರೆಯ ಸುತ್ತ ಬೇಲಿ ಹಾಕದೇ ಇದ್ದಲ್ಲಿ ಪುನಃ ಕೆರೆ ಒತ್ತುವರಿಯಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಇಲಾಖಾ ವತಿಯಿಂದ ಬೇಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಟ್ರಂಚ್ ತೆರದು ವ್ಯಾಪ್ತಿ ಗುರುತಿಸಿ ತೆರವುಗೊಳಿಸಿ ಎಂದು ಅವರು ಮಾತನಾಡಿದರು.
ಬಾಕಿ ಇರುವ ಕೆರೆಗಳ ಅಳತೆ ಕಾರ್ಯವನ್ನು ಕೇವಲ ಸರ್ಕಾರಿ ಭೂಮಾಪಕರು ಪೂರ್ಣಗೊಳಿಸಲು ಕಷ್ಟ ಸಾಧ್ಯವಾಗಿರುವುದರಿಂದ ಪರವಾನಗಿ ಹೊಂದಿರುವ ಖಾಸಗಿ ಭೂಮಾಪಕರು ಅಳತೆ ಮಾಡಿಸಿ ಅದನ್ನು ಸರ್ಕಾರಿ ಭೂಮಾಪಕರು ಪರಿಶೀಲನೆ ನಡೆಸಿ ಅಂತಿಮಗೊಳಿಸುವಂತೆ ಅವರು ಸೂಚಿಸಿದರು.
ಈ ಸಂಬಂಧ ವ್ಯವಸ್ಥಿತ ಕಾರ್ಯವನ್ನು ರೂಪಿಸುವಂತೆ ಭೂದಾಖಲೆಗಳ ಉಪ ನಿರ್ದೇಶಕರಿಗೆ ಸೂಚಿಸಲಾಯಿತು ತಾಲೂಕು ಮಟ್ಟದಲ್ಲಿ ತಹಸೀಲ್ದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಸರ್ವೆ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಆದ್ಯತೆ ಮೇಲೆ ಕ್ರಮವಹಿಸುವಂತೆ ಅವರು ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ಭೂದಾಖಲೆಗಳ ಉಪನಿರ್ದೇಶಕರು ಹೇಮಲತಾ ಹಾಗೂ ಸಣ್ಣ ನೀರಾವರಿ, ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here