ಪ್ರತಿಯೊಬ್ಬರೂ ಯೋಧರಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಅಥವಾ ಸೋಪಿನಿಂದ ಕೈತೊಳೆಯುವ ನಿಯಮ ಪಾಲನೆ ಮಾಡಿದರೆ ಮಾತ್ರ ಕೊರೋನ ವಿರುದ್ಧದ ಯುದ್ಧ ಗೆಲ್ಲಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷರಾದ ಡಾ|| ಎನ್.ರಮೇಶ್ ತಿಳಿಸಿದ್ದಾರೆ.
ಐ.ಎಂ.ಎ ಜಿಲ್ಲಾ ಶಾಖೆ ಹಮ್ಮಿಕೊಂಡಿರುವ ಮಾಸ್ಕ್ ಧರಿಸಿ-ಕೊರೋನ ಓಡಿಸಿ ಅಭಿಯಾನದ ಜನ ಜಾಗೃತಿ ಸಪ್ತಾಹದ ಅಂಗವಾಗಿ ಇಂದು ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಆಟೊರಿಕ್ಷಾ ಚಾಲಕರು ಮತ್ತು ಪ್ರಯಾಣಿಕರಿಗೆ ಕೊರೋನ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲ್ಲಿ ಮಾತನಾಡಿದ ಅವರು ಕೊರೋನದಂತಹ ಸಾಂಕ್ರಾಮಿಕ ರೋಗಗಳನ್ನು ಸರ್ಕಾರ ಅಥವಾ ವೈದ್ಯರಿಂದ ಮಾತ್ರ ನಿಯಂತ್ರಿಸಲಾಗುವುದಿಲ್ಲ. ರೋಗ ಹರಡದಂತೆ ಪ್ರತಿ ಪ್ರಜೆ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಪ್ರತಿ ನಿತ್ಯ ಎಲ್ಲಾ ರೀತಿಯ ಜನರೊಂದಿಗೆ ಒಡನಾಟ ಹೊಂದಿರುವ ಆಟೊರಿಕ್ಷಾ ಚಾಲಕರು ಕಡ್ಡಾಯವಾಗಿ ಕೊರೋನ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು. ಆಟೋರಿಕ್ಷಾ ಹತ್ತುವ ಪ್ರಯಾಣಿಕರಿಗೂ ನಿಯಮ ಪಾಲನೆಗೆ ಸೂಚಿಸಬೇಕು ಹಾಗೂ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಾ|| ಎನ್. ರಮೇಶ್ ಅವರು ತಿಳಿಸಿದರು.
ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಅಬ್ದುಲ್ ಬಷೀರ್ ಅವರು ಮಾತನಾಡಿ ಆಟೋರಿಕ್ಷಾ ಚಾಲಕರಿಗೆ ಸದ್ಯದಲ್ಲೇ ಉಚಿತವಾಗಿ ಕೋವಿಡ್ ಪರೀಕ್ಷಾ ಶಿಬಿರ ಏರ್ಪಡಿಸಲಾಗುವುದು. ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಂಡು ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಐ.ಎಂ.ಎ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ|| ಬಿ.ಜಿ. ವಾಗೀಶ್ ಭಟ್, ಖಜಾಂಚಿ ಡಾ|| ತೇಜಸ್ವಿ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.