ಹಾಸನ: ಜೀವನಾಂಶಕ್ಕೆ ದಾವೆ ಹೂಡಿದ ಪತ್ನಿಯ ಕೊಂದ ಗಂಡ, ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತಿದ್ದಳು ಸುಶ್ಮಿತಾ!

0

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ದೂರ ಉಳಿದಿದ್ದ ಪತ್ನಿ ಜೀವನಾಂಶದ ದಾವೆ ಹಾಕಿದ್ದರು. ಆದರೆ ಈ ದಾವೆ ಇದೀಗ ಯುವತಿಯ ಪ್ರಾಣವನ್ನೇ ತೆಗೆದಿದೆ. ಹೌದು, ಹಾಸನದಲ್ಲಿ ಈ ಘಟನೆ ನಡೆದಿದ್ದು ಪತ್ನಿ ಸುಶ್ಮಿತಾ ಎಂಬವರನ್ನು ಪತಿ ನಾಗರಾಜು ಜೀವನಾಂಶ ಕೇಳಿದಕ್ಕೆ ಕೊಲೆ ಮಾಡಿ ಬಳಿಕ ಗೆಳೆಯರ ಸಹಾಯದಿಂದ ಕೆರೆಗೆ ಎಸೆದಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ: ಪತಿಯ ಅನೈತಿಕ ಸಂಬಂಧದಿಂದ ನೊಂದು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಪತ್ನಿ, ಜೀವನಾಂಶಕ್ಕಾಗಿ ದಾವೆ ಹೂಡಿದ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿ ಶವವನ್ನು ಕೆರೆಗೆ ಎಸೆದಿದ್ದ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಆತನ ತಂದೆ, ತಾಯಿ ಸಹೋದರ ಸಮೇತ ಐವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಷ್ಮಿತಾ(26) ಮೃತ ದುರ್ದೈವಿ. ಈಕೆಯನ್ನು ಕೊಲೆ ಮಾಡಿ ತಾಲೂಕಿನ ದುದ್ದ ಹೋಬಳಿ ಚೀರನಹಳ್ಳಿ ಕೆರೆಗೆ ಹಾಕಿ ಪತಿ ನಾಗರಾಜು(28), ಕೊಲೆಗೆ ಸಹಕರಿಸಿದ ಆತನ ತಂದೆ ಈಶ್ವರರಾವ್‌(59), ತಾಯಿ ಜಯಂತಿ(57) ಸಹೋದರ ಮೋಹನ ಹಾಗೂ ಶೈಲ ಬಂಧಿತ ಆರೋಪಿಗಳು ಎಂದು ಎಸ್‌ಪಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.1 ರಂದು ಚೀರನಹಳ್ಳಿ ಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಶ್ರೀನಿವಾಸಗೌಡ ಅವರು ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ, ಸಿಪಿಐ ಸುರೇಶ್‌ ಮತ್ತು ಎಸ್‌ಐ ಮಧು ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.

ಪ್ರಕರಣವೇನು?
ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರದ ಸುಷ್ಮಿತಾ ಆರು ವರ್ಷದ ಹಿಂದೆ ಅದೇ ಜಿಲ್ಲೆ ಬೆಲಗೂರು ಗ್ರಾಮದ ನಾಗರಾಜುನನ್ನು ಪ್ರೇಮಿಸಿ ವಿವಾಹವಾಗಿದ್ದರು. ಅವರಿಗೆ 4 ವರ್ಷದ ಯಶಸ್ವಿನಿ ಎಂಬ ಮಗಳಿದ್ದಾಳೆ. ನಾಗರಾಜು ಬೆಲಗೂರು ಸಮೀಪದ ಕೋಡಿಹಳ್ಳಿ ಗ್ರಾಮದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನಲ್ಲದೆ, ತನ್ನ ಕುಟುಂಬದೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಸುಷ್ಮಿತಾ ವರ್ಷದ ಹಿಂದೆ ಪತಿಯನ್ನು ತೊರೆದು ಅರಸೀಕೆರೆಯಲ್ಲಿದ್ದ ತಂದೆ ಕೃಷ್ಣಮೂರ್ತಿ ಅವರ ಮನೆಯಲ್ಲಿದ್ದು, ಗಾರ್ಮೆಂಟ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಮಧ್ಯೆ ಪತಿ ನಾಗರಾಜುವಿನಿಂದ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆ ವಿಷಯವಾಗಿಯೇ ಮಾತನಾಡುವ ನೆಪದಲ್ಲಿ ಅ.29 ರಂದು ತಮ್ಮ ಹಳೆಯ ಮನೆಗೆ ಕರೆಸಿಕೊಂಡ ಪತಿ ನಾಗರಾಜು, ಸುಷ್ಮಿತಾಳನ್ನು ಕೊಲೆ ಮಾಡಿದ್ದಾನೆ. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ತನ್ನ ಸಹೋದರ ಮೋಹನಕುಮಾರ ಸೇರಿದಂತೆ ಮೂವರು ಸೇರಿ ಸಾಕ್ಷ್ಯಾ ನಾಶಮಾಡಲು ಶವವನ್ನು ಕಾರಿನಲ್ಲಿ ಸಾಗಿಸಿ ದುದ್ದ ಪೊಲೀಸ್‌ ಠಾಣೆ ವ್ಯಾಪ್ತಿಯ ಚೀರನಹಳ್ಳಿ ಕೆರೆಗೆ ಕಲ್ಲುಕಟ್ಟಿ ಹಾಕಲಾಗಿತ್ತು ಎಂದು ಎಸ್‌ಪಿ ತಿಳಿಸಿದರು.
ಮೃತದೇಹ ಪತ್ತೆ!
ಕೆರೆಯಲ್ಲಿ ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ವಾರಸುದಾರರ ಪತ್ತೆಗೆ ಮಡಿಕೇರಿ, ಮೈಸೂರು, ಬೆಂಗಳೂರು, ಯಾದಗಿರಿ, ಚಿತ್ರದುರ್ಗ ಹೀಗೆ ನಾನಾ ಜಿಲ್ಲೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು. ಚಿತ್ರದುರ್ಗ ಜಿಲ್ಲೆ ಶ್ರೀರಾಮಪುರದ ಪೊಲೀಸ್‌ ಠಾಣೆಯಲ್ಲಿ ಸುಷ್ಮಿತಾ ಕಾಣೆಯಾಗಿರುವ ಬಗ್ಗೆ ಆಕೆ ತಂದೆ ಕೃಷ್ಣಮೂರ್ತಿ ಅ.29 ರಂದು ದೂರು ದಾಖಲಿಸಿದ್ದರು. ತಂದೆ, ತಾಯಿಯನ್ನು ಭೇಟಿ ಮಾಡಿದ ಪೊಲೀಸರ ತಂಡ, ಭಾವಚಿತ್ರ, ಆಕೆಯ ಸ್ವತ್ತುಗಳ ಬಗ್ಗೆ ಮಾಹಿತಿ ನೀಡಿದಾಗ ಅವರು ದೃಢಪಡಿಸಿದರು ಎಂದು ತಿಳಿಸಿದರು.
ಪ್ರಕರಣದಲ್ಲಿ ಆರೋಪಿ ಪತಿ ನಾಗರಾಜ ಹಾಗೂ ಆತನ ತಂದೆ ಈಶ್ವರರಾವ್‌, ತಾಯಿ ಜಯಂತಿ ಕೂಡ ಕೊಲೆಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಎಲ್ಲರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದರು.

LEAVE A REPLY

Please enter your comment!
Please enter your name here