ಎಲ್ಲರನ್ನೂ ನಾಚಿಸುವಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸಂಸತ್ ನಲ್ಲಿ ಕಾವೇರಿ ವಿಚಾರ ; ನಿರೂಪಣೆ ಮಂಡಿಸಿದ್ದು ಹೀಗಿತ್ತು…

0

ಕಳೆದ 60 ವರ್ಷಗಳಿಂದ ಕರ್ನಾಟಕದ ಜನರನ್ನು ಸಂಕಷ್ಟಕ್ಕೀಡುಮಾಡಿರುವ ಕಾವೇರಿ ಜಲ ವಿವಾದವನ್ನು ಕಾನೂನು ಸಮರದ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಎರಡೂ ಕಡೆಯ ಜನಪ್ರತಿನಿಧಿಗಳು ಕುಳಿತು ಸೌಹಾರ್ದ ಮಾತುಕತೆ ಮಾಡಿದಾಗ ಮಾತ್ರ ಪರಿಹಾರ ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ವಿಚಾರಗಳನ್ನು ನಾನು ಎತ್ತುವುದಿಲ್ಲ. ತಮಿಳುನಾಡಿನ 40 ಸಂಸದರು ಕಾವೇರಿ ವಿಚಾರವನ್ನು ಒಗ್ಗಟ್ಟಿನಿಂದ ಎದುರಿಸುತ್ತಾರೆ. ಆದರೆ ನಮ್ಮ ಸಂಸದರಲ್ಲಿ ಒಗ್ಗಟ್ಟಿಲ್ಲ ಎಂದು ವಿಷಾದಿಸಿದರು.

ಸೋಮವಾರ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಅವರು, ಕಾವೇರಿಯೂ ಸೇರಿದಂತೆ ಅನೇಕ ನದಿ ನೀರಿನ ವಿಚಾರವಾಗಿ ಕರ್ನಾಟಕ ಸಂಕಷ್ಟ ಅನುಭವಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾನುವಾರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಮುಖಂಡರ ಸಭೆ ನಡೆಯಿತು. ಆ ಸಭೆಯಲ್ಲಿ ನೆರೆರಾಜ್ಯಗಳ ಮುಖಂಡರು ಕಾವೇರಿ ಜಲವಿವಾದವನ್ನು ಪ್ರಸ್ತಾಪಿಸಿದರು. ಅವರು ಮಾತನಾಡುತ್ತಿರಬೇಕಾದರೆ ನಾನು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ದುರ್ದೈವವೆಂದರೆ ಕರ್ನಾಟಕದ ಎಲ್ಲ ದೃಶ್ಯಮಾಧ್ಯಮಗಳು ದೇವೇಗೌಡರಿಗೆ ಕಾವೇರಿ ವಿಚಾರವಾಗಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಯಾವುದೇ ಆಸಕ್ತಿ ಇಲ್ಲ ಎಂದು ಟೀಕಿಸಿದರು. ನಾನು ಈಗ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಯಾವುದೇ ಗುಣಲೋಪಗಳನ್ನು ಪಟ್ಟಿ ಮಾಡಲು ಹೋಗುವುದಿಲ್ಲ. ಅದೇ ರೀತಿ ತಮಿಳ್ನಾಡಿನ ಜನ ಕಳೆದ 60 ವರ್ಷಗಳಿಂದ ನಡೆಸುತ್ತಿರುವ ಸಮರದ ವಿಚಾರವಾಗಿಯೂ ನಾನು ಹಿಂದಿನವುಗಳನ್ನು ಪ್ರಸ್ತಾಪ ಮಾಡಲು ಇಚ್ಛಿಸುವುದಿಲ್ಲ. ಆದರೆ ಒಂದು ಸಂಗತಿಯನ್ನು ಹೇಳಲು ಇಚ್ಛಿಸುತ್ತೇನೆ. ಅವರ ಒಗ್ಗಟ್ಟಾಗಿ ಈ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ನಿಜ ಅವರಿಗೆ ಬಹುಮತ ಇದೆ. ಅವರು 40 ಮಂದಿ ಲೋಕಸಭಾ ಸದಸ್ಯರು ರಾಜ್ಯದ ವಿಷಯ ಬಂದಾಗ ಒಗ್ಗಾಟ್ಟಾಗಿದ್ದಾರೆ.

ನಾವು ಕೇವಲ 28 ಮಂದಿ ಇದ್ದು ನಮ್ಮಲ್ಲಿ ಒಗ್ಗಟ್ಟಿಲ್ಲ. ಆದರೆ ಇದರ ಪರಿಣಾಮವಾಗಿ ಕಷ್ಟಪಡುತ್ತಿರುವುದು ಮಾತ್ರ ನಮ್ಮ ಜನರು. ನಾನು ಕಳೆದ 60 ವರ್ಷಗಳಿಂದ ಒಬ್ಬಂಟಿಯಾಗಿ ಹೋರಾಟ ನಡೆಸುತ್ತಿದ್ದೇನೆ. ಇದರ ಇತಿಹಾಸ ಅಂಕಿಅಂಶಗಳನ್ನೆಲ್ಲಾ ನಾನು ಈಗ ಕೆದಕಲು ಹೋಗುವುದಿಲ್ಲ, ಕೂತು ಮಾತನಾಡದಿದ್ದರೆ ಸಮಸ್ಯೆ ಉಲ್ಬಣ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಏನಾಯಿತು ಎಂಬುದು ನನ್ನ ಗೆಳೆಯರಿಗೆ ಗೊತ್ತು. ನಿಜವಾಗಿಯೂ ನಾನು ಏನು ಹೇಳಲು ಬಯಸುತ್ತೇನೆ ಎಂದರೆ ಇದನ್ನು ಕಾನೂನು ಸಮರದಿಂದ ಖಂಡಿತ ಬಗೆಹರಿಸಲು ಸಾಧ್ಯವಿಲ್ಲ. ಸ್ನೇಹಸಂಧಾನ, ಮಾತುಕತೆಗಳಿಂದ ಮಾತ್ರ ಸಾಧ್ಯ. ಎಲ್ಲರೂ ಒಂದೆಡೆ ಕೂತು ಸಮಾಧಾನದಿಂದ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

ಇಲ್ಲವಾದಲ್ಲಿ ಈ ಸಮಸ್ಯೆ ಹಾಗೆಯೇ ಮುಂದುವರಿಯುವುದರೊಂದಿಗೆ ಜನ ಮತ್ತಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ತಮಿಳುನಾಡಿನ ನನ್ನ ಸಹೋದ್ಯೋಗಿಗಳಲ್ಲಿ ನನ್ನದೊಂದೇ ವಿನಂತಿ ಈ ರೀತಿಯ ಜಗಳದಿಂದ ಸಮಸ್ಯೆ ಬಗೆಹರಿಯದು, ದುರದೃಷ್ಟವಶಾತ್ ಕರ್ನಾಟಕದ ಎಲ್ಲ ಯೋಜನೆಗಳು ನೆರೆ ರಾಜ್ಯಗಳೊಂದಿಗೆ ತಳುಕು ಹಾಕಿಕೊಂಡಿವೆ. ಒಂದು ಕಡೆಯಿಂದ ಗೋವಾ, ಮತ್ತೊಂದು ಕಡೆಯಿಂದ ತೆಲಂಗಾಣ ಹೀಗೆ ಎಲ್ಲೆಡೆಯಿಂದ ಕರ್ವಾಟಕಕ್ಕೆ ಹೊಡೆತ ತಿನ್ನುತ್ತಿದೆ. ಹೀಗಾಗಿ ನನ್ನ ನೆರೆ ರಾಜ್ಯದ ಎಲ್ಲ ಮಿತ್ರರೊಂದಿಗೆ ಮನವಿಯೆಂದರೆ ಎಲ್ಲರೂ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸೋಣ ಎಂದು ಕೈಮುಗಿದು ಕೇಳಿಕೊಂಡರು. ಆದರೆ ಈ ವೇಳೆ ನೆರೆಯ ತಮಿಳುನಾಡಿನ ಸಂಸದರು ಈ ಮಾತನ್ನು ಖಂಡಿಸಿ ಕರ್ನಾಟಕವು ಸುಪ್ರೀಂ ಕೋರ್ಟ್ ಮತ್ತು ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿಲ್ಲ. ದೇವೇಗೌಡರು ಈಗ ಸದನದಲ್ಲಿ ಸಹಾನುಭೂತಿ ಪಡೆಯಲು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here