ಮಳೆ ಹಾನಿ ನಷ್ಟಕ್ಕೆ ಹಂತ-ಹಂತವಾಗಿ ಪರಿಹಾರ
೩ನೇ ಅಲೆ ನಿಯಂತ್ರಣಕ್ಕೆ ಕಠಿಣ ಸೂಚನೆ ನೀಡಿದ ಕೆ. ಗೋಪಾಲಯ್ಯ
ಹಾಸನ: ಹೆಚ್ಚು ಮಳೆ ಬಂದು ಹಾನಿಯಾಗಿರುವ ಮನೆಗಳಿಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತೆ ೧ ಲಕ್ಷ ರೂಗಳನ್ನು ಹಂತ-ಹಂತವಾಗಿ ಕೊಡಲಾಗುವುದು ಹಾಗೂ ಕೊರೋನಾ ೩ನೇ ಅಲೆಯ ನಿಯಂತ್ರಣಕ್ಕಾಗಿ ಸಮಸ್ಯೆ ಆಗದಂತೆ ಆರೋಗ್ಯಾಧಿಕಾರಿಗಳಿಗೆ ಕಠಿಣ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಜೊತೆ ಮಳೆ ಹಾನಿ ಮತ್ತು ಕೊರೋನಾ ಮೂರನೇ ಅಲೆ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಮೂರನೇ ಅಲೆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಸನ ಜಿಲ್ಲೆಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.
ಆರೋಗ್ಯ ಸಮಸ್ಯೆ ಮತ್ತು ವೈದ್ಯಕೀಯ ಸೇವೆಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ೨೦೦ ಮಕ್ಕಳ ವೆಂಟಿಲೇಟರ್ ಮತ್ತು ಹಸಿಗೆಗಳನ್ನು ಮೀಸಲಿಡಲಾಗಿದೆ. ಇನ್ನು ಆಕ್ಸಿಜನ್ ತೊಂದರೆಯಾಗದಂತೆ ೪೦೦ ಆಕ್ಸಿಜನ್ ಸಿಲೆಂಡರ್ ಗಳನ್ನು ಮೀಸಲಿಡಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಕಠಿಣ ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಯ ಯಾವ ತಾಲೂಕುಗಳಲ್ಲೂ ಆರೋಗ್ಯ ಸೇವೆಯಲ್ಲಿ ಲೋಪವಾದಂತೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲೆಗೆ ಅವಶ್ಯಕವಾಗಿ ಪೂರೈಕೆ ಆಗಬೇಕಾಗಿರುವ ಲಸಿಕೆ ಕುರಿತು ತಿಳಿಸಲಾಗಿದ್ದು, ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗೂ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ತಿಳಿಸಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಹೆಚ್ಚು ಕೊರೋನಾ ಹಾವಳಿ ಇರುವಂತಹ ಜಿಲ್ಲೆಗಳಿಗೆ ಪ್ರಥಮ ಪ್ರಾಶಸ್ತ್ಯ ವಾಗಿ ಹೆಚ್ಚು ಲಸಿಕೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಲಾಗುವುದು ಎಂದರು.
ಹಾಸನ ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಿರುವ ನಷ್ಟದ ಸಂಬಂಧ ೪೮೦ ವಿದ್ಯುತ್ ಕಂಬಗಳು -ಟ್ರಾನ್ಸಫಾರ್ಮಗಳು ಹಾನಿಯಾಗಿದ್ದು, ಈ ಸಂಬಂಧ ಅಗತ್ಯ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ೧೮೯ ಮನೆಗಳು ಭಾಗಶಃ ಹಾನಿಯಾಗಿದ್ದು, ಇವುಗಳಿಗೆ ಮುಖ್ಯಮಂತ್ರಿಯವರು ಘೋಷಿಸಿರುವಂತೆ ಒಂದು ಲಕ್ಷ ರೂ ಪರಿಹಾರವನ್ನು ಹಂತಹಂತವಾಗಿ ನೀಡಲಾಗುವುದು. ಮಳೆ ಹೆಚ್ಚು ಬಂದು ಮನೆ ಹಾಗೂ ಬೆಳೆ ಹಾನಿಗಳ ಕುರಿತು ಎಲ್ಲಾ ತಾಲೂಕುಗಳ ಅಂಕಿ-ಅಂಶ ಪಡೆಯಲಾಗುವುದು ಎಂದು ಹೇಳಿದರು.
ಎಚ್.ಆರ್.ಪಿ. ಭೂಮಿ ಹಂಚಿಕೆ ಹಗರಣ ಸಂಬಂಧ ಯಾವುದೇ ಅಧಿಕಾರಿ ಇರಲಿ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈಗಾಗಲೇ ತನಿಖೆ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿಗಳು ತನಿಖೆಯ ಪ್ರತಿ ಹಂತದ ಬೆಳವಣಿಗೆ ತಿಳಿಸುತ್ತಿದ್ದಾರೆ. ಈ ಹಿಂದೆ ಹಾಸನಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವರಾದ ಅಶೋಕ್ ಅವರು ಕೂಡ ಈ ಹಗರಣ ಸಂಬಂಧ ಯಾರಿಗೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಅದರಂತೆ ತನಿಖೆ ಪ್ರಗತಿಯಲ್ಲಿದ್ದು, ವರದಿ ಪೂರ್ಣ ಬಂದ ಮೇಲೆ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.
ಇದೆ ವೇಳೆ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಧಿಕಾರಿ ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್, ಸರ್ಜನ್ ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.