ವಿಸ್ತರಣೆಗೊಂಡಿರುವ ಚಾಮುಂಡೇಶ್ವರ ಶುಗರ್ ಕಾರ್ಖಾನೆಗೆ ಸಮರ್ಪಕ ಕಬ್ಬು ಸರಬರಾಜಿಗೆ ಅನುಕೂಲವಾಗುವಂತೆ ಪ್ರತಿ ಎಕರೆಗೆ 2.5 ಟನ್ ಬಿತ್ತನೆ ಬೀಜವನ್ನು ಉಚಿತವಾಗಿ ನೀಡುವ ತೀರ್ಮಾನ ” -ಶಾಸಕ ಸಿ.ಎನ್.ಬಾಲಕೃಷ್ಣ
ತಾಲೂಕಿನ ಶ್ರೀನಿವಾಸಪುರದಲ್ಲಿನ ಸರ್ಕಾರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆ ಆರಂಭಿಸಿರುವ ಹಿನ್ನಲೆಯಲ್ಲಿ ಮಂಗಳವಾರದಂದು ಕಾರ್ಖಾನೆ ಆವರಣದಲ್ಲಿ ಕಬ್ಬು ಬೆಳೆಗಾರರು, ರೈತರು, ಮತ್ತು ಲಾರಿ ಮಾಲೀಕರ ಸಭೆ ನಡೆಸಿ ಮಾತನಾಡಿದ ಅವರು, ರೈತರು ಕಬ್ಬು ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ 5ಎಕರೆಗೆ ಸೀಮಿತಗೊಳಿಸಿ ಪ್ರತಿ ಎಕರೆಗೆ 24 ಸಾವಿರ ರೂ. ಮೌಲ್ಯದ 2.5 ಟನ್ನಂತೆ 10 ಕೋಟಿ ರು. ಮೌಲ್ಯದ ಬಿತ್ತನೆ ಬೀಜವನ್ನು ಕಾರ್ಖಾನೆ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಉಚಿತ ಬಿತ್ತನೆ ಬೀಜದ ಲಾಭ ಪಡೆದು ರೈತರು ಹೆಚ್ಚು ಕಬ್ಬು ನಾಟಿ ಮಾಡಬೇಕು, ತಾಲೂಕಿನಲ್ಲಿ ಏತನೀರಾವರಿ ಯೋಜನೆಗಳ ಮೂಲಕ ಕೆರೆಕಟ್ಟೆಗಳು ತುಂಬಿದ್ದು, ಅಂತರ್ಜಲ ಹೆಚ್ಚಿರುವ ಹಿನ್ನಲೆಯಲ್ಲಿ ಕೊಳವೆಬಾವಿಗಳ ಆಶ್ರಯದೊಂದಿಗೆ ಹೆಚ್ಚು ಕಬ್ಬು ಬೆಳೆದು ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರಬೇಕೆಂದರು. ಪ್ರತಿ ಹಂಗಾಮಿನಲ್ಲಿ 8.5 ಲಕ್ಷ ಟನ್ ಕಬ್ಬು ಅರೆಯುವ ಸಾಮಾರ್ಥ್ಯವಿರುವ ಕಾರ್ಖಾನೆಯಲ್ಲಿ ಕಳೆದ ಸಾಲಿನಲ್ಲಿ ಕಬ್ಬಿನ ಕೊರತೆಯಿಂದ 2.75 ಲಕ್ಷ ಟನ್ ಕಬ್ಬು ನುರಿಸಲಾಗಿದೆ. ಪ್ರಸಕ್ತ ವರ್ಷ 7.5ಸಾವಿರ ಎಕರೆ ಪ್ರದೇಶದಲ್ಲಿರುವ 3 ಲಕ್ಷ ಮೆಟ್ರಿಕ್ ಟನ್ ಕಬ್ಬಿನೊಂದಿಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಕಬ್ಬು ಸೇರಿ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದರು.
” ಈ ಭಾಗದ ರೈತರಿಗೆ ವರದಾನವಾಗಿರುವ ಸಕ್ಕರೆ ಕಾರ್ಖಾನೆಯೊಂದಿಗೆ ರೈತರು ಸಹಕರಿಸಿದರೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳುವ ಜತೆಗೆ ಕಾರ್ಖಾನೆಯ ಏಳಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕಳೆದ ಅವಧಿಗಿಂತ ಹೆಚ್ಚು ಕಬ್ಬು ನುರಿಸಲು ಚಿಂತಿಸಲಾಗಿದೆ “.
-ಪೂರ್ಣಸ್ವಾಮಿ, ವ್ಯವಸ್ಥಾಪಕ ಚಾಮುಂಡೇಶ್ವರಿ ಶುಗರ್ ಶ್ರೀನಿವಾಸಪುರ,
ಸಭೆಯಲ್ಲಿ ಹೆಚ್.ಎಸ್.ಎಸ್.ಕೆ.ಅಧ್ಯಕ್ಷ ವೆಂಕಟೇಶ್, ಜನರಲ್ ಮ್ಯಾನೇಜರ್ ಪೂರ್ಣಸ್ವಾಮಿ, ವ್ಯವಸ್ಥಾಪಕ ಮಂಜುನಾಥ್, ಸಿಸಿ ದೇವೇಗೌಡ ಸೇರಿ ರೈತ ಮುಖಂಡರು ಇದ್ದರು.