ಹಾಸನ: ಅವರಿಬ್ಬರು ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಯ ಫಲವಾಗಿ ಮಕ್ಕಳಿಬ್ಬರು ಜನಿಸಿದ್ದರು. ಹೀಗಿರುವಾಗ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆಯೂ ಗಲಾಟೆ ನಡೆದಿತ್ತು. ಗಲಾಟೆ
ವಿಕೋಪಕ್ಕೆ ತಿರುಗಿ, ಕೋಪದ ಕೈಗೆ ಬುದ್ದಿ ಕೊಟ್ಟ ಪತಿ-ಪತ್ನಿಯನ್ನೇ ಕೊಂದು ಬಿಟ್ಟಿದ್ದ. ಯಾರಿಗೂ ತಿಳಿಯದಂತೆ ಮಣ್ಣಿನಲ್ಲಿ ಹೂತಿಟ್ಟು, ಊರು ಬಿಟ್ಟಿದ್ದ. ಆದರೆ
ಮೂರು ತಿಂಗಳ ಬಳಿಕ ಬೀದಿ ನಾಯಿಗಳಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಂತಿವಾಸು (28) ಹತ್ಯೆಯಾದವಳು. ಪವನ್ ಕುಮಾರ್ ಆರೋಪಿಯಾಗಿದ್ದಾನೆ. ಮೂರು ತಿಂಗಳ ಹಿಂದೆ ಪವನ್ ಕುಮಾರ್ ಹಾಗೂ
ಶಾಂತಿವಾಸು ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಪವನ್ ಕುಮಾರ್ ಪತ್ನಿ ಶಾಂತಿವಾಸು ಮೇಲೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಶಾಂತಿ ಸ್ಥಳದಲ್ಲೇ ಅಸುನೀಗಿದ್ದಳು.ಪತ್ನಿ ಮೃತಪಟ್ಟಿದ್ದಕ್ಕೆ ಹೆದರಿದ ಪವನ್ ಕುಮಾರ್
ಕೃತ್ಯ ಹೊರಗೆ ಬಂದರೆ ಜೈಲು ಸೇರುವುದು ಗ್ಯಾರಂಟಿ ಎಂದುಕೊಂಡಿದ್ದ. ಈ ಮಧ್ಯೆ ಆತನ ಕ್ರಿಮಿನಲ್ ಮೈಂಡ್ ಸಕ್ರಿಯವಾಗಿತ್ತು. ಹೇಗಾದರೂ ಸರಿ ಇದರಿಂದ
ಬಚಾವ್ ಆಗಬೇಕು ಎಂದಕೊಂಡವನು ಮನೆಯಿಂದ ಸಮೀಪವಿರುವ ಹಳ್ಳದ ಪಕ್ಕದ ಗುಂಡಿಯಲ್ಲಿ ಮಣ್ಣು ತೆಗೆದು ಶವನ್ನು ಹೂತು ಹಾಕಿದ್ದ.
ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಕುಮಾರ್, ಪತ್ನಿಯನ್ನು ಕೊಂದ ಬಳಿಕ ಮಕ್ಕಳೊಂದಿಗೆ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿದ್ದ . ಮೂರು ತಿಂಗಳ ಕಾಲ ಆರಾಮಾಗಿದ್ದ ಆತ ನಾಯಿಗಳಿಂದ ಸಿಕ್ಕಿಬಿದ್ದಿದ್ದಾನೆ. ಅಂದಹಾಗೇ
ನಿನ್ನೆ (ನ.2) ವಾಸನೆಗೆ ಕೆಲ ನಾಯಿಗಳು ಮಣ್ಣಿನಿಂದ ಮೃತದೇಹದ ಮೂಳೆಯನ್ನು ಎಳೆದಾಡಿದೆ. ತೋಟದ ಮಾಲೀಕರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಕೊಳೆತಿರುವ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಹೊರತೆಗೆದ ಪೊಲೀಸರು
ಕೂಡಲೇ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನ.3ರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಕಳೆಬರವನ್ನು ಹೊರತೆಗೆದಿದ್ದಾರೆ. ಮೃತದೇಹವು
ಸಂಪೂರ್ಣವಾಗಿ ಕೊಳೆತಿರುವ ಸ್ಥಿತಿಯಲ್ಲಿ ಪತ್ತೆ ಆಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.