ಬೆಂಗಳೂರು ಮಂಗಳೂರು ನಡುವಿನ ವಿಶೇಷ ಸೆಂಟ್ರಲ್ ಎಕ್ಸ್‌ಪ್ರೆಸ್ ನ್ನು ನೈರುತ್ಯ ರೈಲ್ವೆ ಸದ್ಯಕ್ಕೆ ಕೊರೋನಾ ಕಾರಣದಿಂದ ನಿಲ್ಲಿಸಿದೆ.ರಾಜಧಾನಿ ಮತ್ತು ಕರಾವಳಿ ಜನರ ನಡುವಿನ ಸಂಪರ್ಕ ಕೊಂಡಿಯಂತೆ ಓಡುತ್ತಿದ್ದ ರೈಲು ಸದ್ಯಕ್ಕೆ ನಿಂತಿದೆ.
ಕೊರೋನಾ ಕಾರಣದಿಂದ ಎಲ್ಲಾ ಸಾರಿಗೆ ಇಲಾಖೆಗಳು ನಷ್ಟದಲ್ಲಿ ಇರುವುದು ಗೊತ್ತೇ ಇದೆ. ಅದರಂತೆ ರೈಲಿನಲ್ಲೂ ಜನರ ಓಡಾಟ ಕಮ್ಮಿಯಾಗಿದೆ ಇದನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ನಿಲ್ಲಿಸಿರುವುದಾಗಿ ರೈಲ್ವೆ ತಿಳಿಸಿದೆ. ವಾರಕ್ಕೆ ನಾಲ್ಕು ದಿನ ಬೆಂಗಳೂರು ಮತ್ತು ಮಂಗಳೂರು ನಡುವೆ ಈ ರೈಲು ಸಂಚಾರ ನಡೆಸುತಿತ್ತು.
ಬೆಂಗಳೂರು ಮತ್ತು ಮಂಗಳೂರಿನ ನಡುವಿನ ರೈಲ್ವೆ ಸಂಚಾರ ಅಕ್ಟೋಬರ್ 7 ರಿಂದ ಸ್ಥಗಿತಗೊಳ್ಳಲಿದೆ. ಜೊತೆಗೆ ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ನಡುವಿನ ರೈಲ್ವೆ ಸಂಚಾರ ಅಕ್ಟೋಬರ್ 11 ರಿಂದ ಸ್ಥಗಿತಗೊಳ್ಳಲಿದೆ.
ವಿಶೇಷ ರೈಲಿನ ಜೊತೆಗೆ ವಾರಕ್ಕೆ ಮೂರು ದಿನ ಸಂಚಾರ ಮಾಡುವ KSR ಬೆಂಗಳೂರು- ಸೆಂಟ್ರಲ್ ಮಂಗಳೂರು( ಮೈಸೂರು ಮಾರ್ಗ) ಸಂಚಾರ ಮಾಡುವ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ನೈರುತ್ಯ ರೈಲ್ವೆ ಆದೇಶ ಹೊರಡಿಸಿದೆ.
ವೇಳಾಪಟ್ಟಿ
ರೈಲು ಸಂಖ್ಯೆ 06517 KSR ಬೆಂಗಳೂರು-ಮಂಗಳೂರು ಸೆಂಟ್ರಲ್ ವಾರಕ್ಕೆ ಮೂರು ದಿನ ಸಂಚಾರ ನಡೆಸಲಿದೆ. KSR ಬೆಂಗಳೂರು ರೈಲು ಬುಧವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ಶುರುಮಾಡಲಿದೆ. ಅಕ್ಟೋಬರ್ 7ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಭಾನುವಾರ, ಸೋಮವಾರ ಮತ್ತು ಮಂಗಳವಾರ ಈ ಮೊದಲು ಸಂಚಾರ ನಡೆಸುತ್ತಿತ್ತು.
ರೈಲು ಸಂಖ್ಯೆ 06518 KSR ಮಂಗಳೂರು ಸೆಂಟ್ರಲ್- ಬೆಂಗಳೂರು ವಾರದಲ್ಲಿ ಮೂರು ದಿನ ಗುರುವಾರ, ಶನಿವಾರ ಮತ್ತು ಸೋಮವಾರ ಸಂಚಾರ ನಡೆಸಲಿದೆ. ಅಕ್ಟೋಬರ್ 8 ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರ ಈ ಮೊದಲು ಸಂಚಾರ ನಡೆಸುತ್ತಿತ್ತು.
ರಸ್ತೆ ಪ್ರಯಾಣ ತ್ರಾಸದಾಯಕ
ಬೆಂಗಳೂರು ಮತ್ತು ಮಂಗಳೂರು ನಡುವಿನ ರಸ್ತೆಮಾರ್ಗ ಬೆಂಗಳೂರಿನಿಂದ ಹಾಸನ ದವರೆಗೆ ಅಷ್ಟೇ ಚೆನ್ನಾಗಿದ್ದು ಹಾಸನದಿಂದ ಮಂಗಳೂರಿನವರೆಗೆ ಪ್ರಯಾಣಿಕರು ನರಕಯಾತನೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಜನ ರೈಲಿನಲ್ಲಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಇದರಿಂದ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಕರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರ ಇದೀಗ ಅರಂಭವಾಗಿದ್ದು ಹೊಸ ಬದಲಾವಣೆಯೊಂದಿಗೆ ಬಂದಿರುವುದು ಪ್ರಯಾಣಿಕರಿಗೆ ಸ್ವಲ್ಪ ದಿನಗಳ ಮಟ್ಟಿಗೆ ಅಂದರೆ ಹೊಸ ಸಮಯ ಹಾಗೂ ದಿನಗಳ ಬದಲಾಗಿರುವುದು ತಿಳಿಯುವವರೆಗೆ ಸ್ವಲ್ಪ ಕಷ್ಟವಾಗುತ್ತದೆ.