ಹಾಸನ: ಶ್ರವಣಬೆಳಗೊಳ ಪೊಲೀಸರು ಕಾರ್ಯಾಚರಣೆ ನಡೆಸಿ ಹಾಸನ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚನ್ನರಾಯಪಟ್ಟಣ ತಾಲುಕು ಮಾಚ ಬುವನಹಳ್ಳಿಯ ಸುಹಾಸ್ ಮತ್ತು ಕೆ.ಆರ್.ಪೇಟೆ ತಾಲೂಕು ಸಂತೆ ಬಾಚಳ್ಳಿಯ ಶಿವಕುಮಾರ ಬಂಧಿತ ಆರೋಪಿಗಳು. ಇವರಿಂದ 5.80 ಲಕ್ಷ ರೂ. ಮೌಲ್ಯದ
9 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಳೆದ ಜೂ.26 ರಂದು ಚಲ್ಯ ಗ್ರಾಮದ ಪ್ರತಾಪ್ ಸಿ.ಆರ್.ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳುವಾಗಿತ್ತು. ಈ ಸಂಬಂಧ ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದರು.
ಆರೋಪಿಗಳ ಪತ್ತೆಗಾಗಿ ಎಎಸ್ಪಿ ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಚನ್ನರಾಯಪಟ್ಟಣ ಡಿವೈಎಸ್ಪಿ ರವಿ ಪ್ರಸಾದ್ ಅವರ ನೇತೃತ್ವದಲ್ಲಿ ಹಿರೀಸಾವೆ ಸಿಪಿಐ ಪ್ರಭಾಕರ್, ಶ್ರವಣಬೆಳಗೊಳ ಪಿಎಸ್‌ಐ ಶಿವಂಕರ್ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ನಿನ್ನೆ ಮಧ್ಯಾಹ್ನ ಬರಾಳು ಗೇಟ್ ಹತ್ತಿರ ಇಬ್ಬರು ವ್ಯಕ್ತಿಗಳು ನಂಬರ್ ಇಲ್ಲದ ಡ್ಯೂಕ್ ಬೈಕ್ ಹಾಗೂ
ಸ್ಪ್ಲೆಂಡರ್ ಬೈಕ್‌ಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ದಸ್ತಗಿರಿ ಮಾಡಿ ವಿಚಾರಣೆಗೆ ಒಳ ಪಡಿಸಿದಾಗ ಕಳ್ಳತನವಾಗಿದ್ದ ಡ್ಯೂಕ್ ಬೈಕ್ ಸೇರಿ ಇತರೆ 8 ಬೈಕ್ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇನ್ನೂ ಸರಿಯಾಗಿ ಮೀಸೆ ಮೊಳೆಯದ ಈ ಇಬ್ಬರು,
ಶ್ರವಣಬೆಳಗೊಳ ಕೆ.ಆರ್.ಪೇಟೆ ಗ್ರಾಮಾಂತರ, ಮೇಲುಕೋಟೆ, ಕೆ.ಆರ್.ಪೇಟೆ ನಗರ, ಪಾಂಡವಪುರ ಹಾಗೂ ನಾಗಮಂಗಲ ಠಾಣೆಗಳಲ್ಲಿ ಕಳವು ಮಾಡಿದ್ದರು.