ಆಲೂರು: ತಾಲೂಕಿನ ಬೈರಾಪುರ ವಲಯ ಅರಣ್ಯಾಧಿಕಾರಿ ಕಚೇರಿ ಬೀಗ ಮುರಿದು ಕಳ್ಳರು ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಫೆ.19 ರ ರಾತ್ರಿ ಕಳ್ಳರು ಕಚೇರಿ ಬೀಗ ಮುರಿದು ಕಚೇರಿಯಲ್ಲಿ ಬಳಸುವ
ನಾಲ್ಕು ಕಂಪ್ಯೂಟರ್, ಒಂದು ಪ್ರಿಂಟರ್, ನಾಲ್ಕು ಯುಪಿಎಸ್ ಬ್ಯಾಟರಿ, ಐದು ಹೆಚ್ ಪಿ ಯ ಒಂದು ಜನರೇಟರ್, ಹಾಗೂ ಇಲಾಖೆ ಕೇಸ್ ಗೆ ಸಂಬಂಧಿಸಿದ ನಾಲ್ಕು ಮೊಬೈಲ್ ಮತ್ತು ಗನ್ ಕ್ಯಾಟಿರಿಸ್ ಹೀಗೆ ಸುಮಾರು 4 ಲಕ್ಷ ಮೌಲ್ಯದ ವಸ್ತುಗಳನ್ನ ಹೊತ್ತೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಸಿಬ್ಬಂದಿ ರಂಗಸ್ವಾಮಿ ಎಂದಿನಂತೆ ಬೆಳಿಗ್ಗೆ ಹಾಜರಾದ ಸಂದರ್ಭದಲ್ಲಿ ಬೀಗ ಮುರಿದಿರುವುದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ನಾಗಪ್ಪ ಮತ್ತು ವಲಯಾಧಿಕಾರಿ ಮರಿಸ್ವಾಮಿ ಅವರಿಗೆ ತಿಳಿಸಿದ್ದು, ತಕ್ಷಣ ಆಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಕ್ಷಣ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿ ಅನಂತ್ ಕುಮಾರ್ ಹಾಗೂ
ಸಿಬ್ಬಂದಿ ರೇವಣ್ಣ ಶ್ವಾನದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ವಲಯಾಧಿಕಾರಿ ಮರಿಸ್ವಾಮಿ ಮಾತನಾಡಿ, ಬೈರಾಪುರ ವ್ಯಾಪ್ತಿಯ ಅರಣ್ಯ ಇಲಾಖೆಗೆ ತಡರಾತ್ರಿಯಲ್ಲಿ ಬಂದ ಅಪರಿಚಿತ ಕಳ್ಳರ ಗ್ಯಾಂಗ್, ಅಪರಿಚಿತ ವಾಹನ ಬಳಸಿ ಬಂದು ಕಚೇರಿಯ ಬೀಗ ಒಡೆದು ಇಲಾಖೆಯ ದಿನ ಬಳಕೆ ವಸ್ತುಗಳಾದ ನಾಲ್ಕು ಕಂಪ್ಯೂಟರ್, ಒಂದು ಪ್ರಿಂಟರ್, ನಾಲ್ಕು ಯುಪಿಎಸ್ ಬ್ಯಾಟರಿ, ಐದು ಹೆಚ್ ಪಿ ಯ ಒಂದು ಜನರೇಟರ್, ಹಾಗೂ ಇಲಾಖೆ ಕೇಸ್ ಗೆ ಸಂಬಂಧಿಸಿದ ನಾಲ್ಕು ಮೊಬೈಲ್ ಮತ್ತು ಗನ್ ಕ್ಯಾಟಿರಿಸ್ ಹೀಗೆ ಸುಮಾರು 4 ಲಕ್ಷ ಮೌಲ್ಯದ ವಸ್ತುಗಳನ್ನ ಖದೀಮರು ಕದ್ದಿರುವುದಾಗಿ ಮಾಹಿತಿ ನೀಡಿದರು.
ಇತ್ತೀಚಿಗೆ ಆಲೂರು ಪಟ್ಟಣ ಸೇರಿದಂತೆ ತಾಲೂಕಾದ್ಯಂತ ವಾರದಲ್ಲಿ ಎರಡ್ಮೂರು ಪ್ರಕರಣಗಳಾಗುತ್ತಿರುವುದರಿಂದ ಜನಸಾಮಾನ್ಯರಲ್ಲಿ ಅತಂಕ ಉಂಟು ಮಾಡಿದ್ದು ಅದಷ್ಟು ಬೇಗ ಕಳ್ಳರನ್ನು ಹಿಡಿದು ಜನಸಾಮಾನ್ಯರ ಅತಂಕ ದೂರ ಮಾಡಬೇಕು ಎಂದು ಜನಸಾಮಾನ್ಯರು ಒತ್ತಾಯಿಸಿದರು.