ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಸೂಚನೆ

0

ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ಪತ್ತೆಗಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಹೆಚ್ಚಿಸುವಂತೆ ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಕೋವಿಡ್-19 ಕುರಿತು ಸಭೆ ನಡೆಸಿ ಮಾತನಾಡಿದ ಅವರು ಸೋಂಕಿತರ ಪತ್ತೆಗಾಗಿ ಆರ್.ಟಿ.ಪಿ.ಸಿ.ಆರ್ ಹಾಗೂ ರ್ಯಾಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎಲ್ಲಾ ತಾಲ್ಲೂಕುಗಳಿಗೂ ನಿರ್ಧಿಷ್ಟ ಗುರಿ ನೀಡಿದ್ದು, ಅದರಂತೆ ಗುರಿ ಸಾಧನೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸೋಂಕಿತರ ಸಂಪರ್ಕಿತರು ಹಾಗೂ ಮೈಕ್ರೋ ಕಂಟೈನ್‍ಮೆಂಟ್ ವಲಯದವರನ್ನು ಎರೆಡೆರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಹಾಗೂ ಮೊಬೈಲ್ ಟೀಂ ಗಳ ಮೂಲಕ ಪರೀಕ್ಷೆ ನಡೆಸುವಂತೆ ಅವರು ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಯಾವುದಾದರು ತಾಲ್ಲೂಕುಗಳಲ್ಲಿ ಆಂಬ್ಯುಲೆನ್ಸ್ ಹಾಗೂ ಮತ್ತಿತರ ವಾಹನಗಳ ಕೊರತೆಯಿದ್ದಲ್ಲಿ ಎಸ್,ಟಿ.ಆರ್.ಎಫ್. ಹಣವನ್ನು ಬಳಸಿ ಖರೀದಿಸುವಂತೆ ಹಾಗೂ ಯಾವುದೇ ರೋಗಿಗೂ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಹಾಟ್‍ಸ್ಪಾಟ್‍ಗಳ ಕಡೆ ಹೆಚ್ಚಿನ ಗಮನಹರಿಸಿ ಪರೀಕ್ಷೆಗೆ ಒಳಪಡಿಸಿ ಹಾಗೂ ಜಿಲ್ಲೆಯಲ್ಲಿರುವ ಪ್ರತಿಯೊಂದು ಹಾಟ್‍ಸ್ಪಾಟ್‍ಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಮಿತಿಯಲ್ಲಿ ಹೋಂ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳ ಬಗ್ಗೆ ಮತ್ತು ಅವರಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಹಾಗೂ ನಿಗಾವಹಿಸುವಂತೆ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೋಂ ಐಸೋಲೇಷನ್‍ನಲ್ಲಿರುವ 17 ದಿನಗಳಲ್ಲಿ ಬಿ.ಎಲ್.ಓಗಳು ಮೂರು ಅಥವಾ ನಾಲ್ಕು ಬಾರಿ ಭೇಟಿ ನೀಡಿ ಆರೋಗ್ಯ ಕುರಿತು ಮಾಹಿತಿ ನೀಡಬೇಕು ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿರುವ ಕುರಿತು ವರದಿ ನೀಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪ್ರತಿ ವಾರದ ವರಧಿ ನೀಡುವಂತೆ ಅವರು ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಮನವೊಲಿಸಿ ಹಾಗೂ ಕೋವಿಡ್-19 ಪರೀಕ್ಷೆ ಕುರಿತು ಅರಿವು ಮೂಡಿಸಿ ನಂತರ ಪರೀಕ್ಷೆಗೆ ಒಳಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಹಿರಣ್ಣಯ್ಯ ಹಾಗೂ ಎಲ್ಲಾ ತಾಲ್ಲೂಕುಗಳ ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here