ಪ್ರಸಕ್ತ ಸಾಲಿನ ಮೈಸೂರು ದಸರಾ ಉದ್ಘಾಟನೆಗೆ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್.ಮಂಜುನಾಥ್ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ಮೇರೆಗೆ ಆಯ್ಕೆಮಾಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮೈಸೂರಿನ ಪೌರ ಕಾರ್ಮಿಕರಾದ ಶ್ರೀಮತಿ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ಶ್ರೀಮತಿ ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಪೊಲೀಸ್ ಕಾನ್ಸ್ ಟೇಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತ ಆಯೂಬ್ ಅಹಮದ್ ಅವರನ್ನು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಸುದ್ದಿಗಾರರಿಗೆ ಸಚಿವರು ತಿಳಿಸಿದರು.
ತಜ್ಞರ ತಂಡ ನೀಡಿದ ವರದಿ ಪ್ರಕಾರವಾಗಿಯೇ ದಸರಾ ಆಚರಣೆಯನ್ನು ಮಾಡಲಾಗುವುದು. ಇದರಲ್ಲಿ ಯಾವುದೇ ವ್ಯತ್ಯಾಸ ಇರದು. ತಂಡದ ಶಿಫಾರಸಿನನ್ವಯ ಎಲ್ಲ ಕಾರ್ಯಕ್ರಮಗಳನ್ನು ನಿಗದಿಪಡಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಿದ್ದೇನೆ. ದಸರಾ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ 300 ಜನ ಸೇರಿದಂತೆ ಯಾವೆಲ್ಲ ನಿಯಮಗಳನ್ನು ವಿಧಿಸಲಾಗಿದೆಯೋ ಅದರಂತೆಯೇ ಕಾರ್ಯಕ್ರಮವನ್ನು ರೂಪಿಸುತ್ತೇವೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ದೀಪಾಲಂಕಾರದ ಬಗ್ಗೆ ಯಾವುದೇ ಗೊಂದಲ ಇಲ್ಲ. ಇದು ಹೈಪವರ್ ಕಮಿಟಿಯಲ್ಲಿ ತೀರ್ಮಾನವಾಗಿದೆ. ಕಳೆದ ಬಾರಿ ಯಾವ ರೀತಿ ಇತ್ತೋ ಅದೇ ರೀತಿ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಹೀಗಾಗಿ ನೂರಾರು ಕಿ.ಮೀ. ದೂರ ಇರುವ ವ್ಯಾಪ್ತಿಯನ್ನು ಕಡಿತಗೊಳಿಸಿ 50 ಕಿಲೋ ಮೀಟರ್ ಗೆ ಸೀಮಿತಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೊರೋನಾ ಹಿನ್ನೆಲೆ ಪಾರ್ಕಿಂಗ್ ಗೆ ಎಲ್ಲ ಕಡೆ ಅನುಮತಿ ಕೊಡುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ಏನೆಲ್ಲ ಕಾರ್ಯಗಳನ್ನು ಕೈಗೊಳ್ಳಬೇಕೋ ಅದನ್ನು ಪಡೆಯುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.