ತೆಂಗಿನಕಾಯಿಯೇ ಬಂಡವಾಳ : ಯಶಸ್ವಿ ಉದ್ಯಮಿಯಾದ ಹಾಸನದ ಹರೀಶ್ ಗೌಡ

0

ಹಾಸನ / ಕರ್ನಾಟಕ : `ವರ್ಜಿನ್ ಕೊಕೊನೆಟ್ ಆಯಿಲ್ ‘

ಪರಿಶುದ್ದ ಹಸಿ ತೆಂಗಿನ ಎಣ್ಣೆಗೆ ಈಗ ಎಲ್ಲೆಡೆ ಡಿಮ್ಯಾಂಡ್ 

ಚಿಕ್ಕ ವಯಸ್ಸಿನಲ್ಲೆ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು

-ನಾಗರಾಜ್ ಹೆತ್ತೂರು

ಹಾಸನ: `ಸರಕಾರಿ ಕೆಲಸವೇ ಬೇಕೆಂದು ಕಾಯಬೇಡಿ  ನೀವು ನಿಮ್ಮ ಕೆಲಸದ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಡಿ’ ಅದಷ್ಟೆ ನಿಮ್ಮನ್ನು ಮೇಲೆ ಎತ್ತುತ್ತದೆ.  ಹೀಗೆಂದು ಹೇಳಿದ್ದು ಹರೀಶ್ ಗೌಡ.

ಹಾಸನದಲ್ಲಿ ತೆಂಗು ಯಥೇಚ್ಚವಾಗಿ ಬೆಳೆಯುತ್ತಾರೆ. ಆದರೂ ಹಾಸನದಲ್ಲಿ ಬಾರ್ ಗಳಿಗೆ ಇರುವ ಬೆಲೆ ಮತ್ತು ಆದಾಯ ತೆಂಗಿನ ಕಾಯಿಗಿಲ್ಲ.  ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ ಆದರೆ ಆ ತೆಂಗನ್ನು  ಬಳಸಿಕೊಂಡು ಚಿಕ್ಕ ವಯಸ್ಸಿನಲ್ಲಿ ಉದ್ಯಮವೊಂದನ್ನು ಕಟ್ಟಿ ಯಶಸ್ವಿ ಉದ್ಯಮಿಯಾಗುವ ಹಾದಿಯಲ್ಲಿರುವ  ಹರೀಶ್ ಗೌಡ.   ಈಗಷ್ಟೇ ವಿದ್ಯಾಭ್ಯಾಸ ಮುಗಿಸಿರುವ ಹಾಗೂ  ಉದ್ಯಮ ಕ್ಷೇತ್ರಕ್ಕೆ ಕಾಲಿಡುವ ಯುವಕರಿಗೆ ಯಶಸ್ವಿ ಕಣ್ಣೆದುರು ಯುವ  ಉದ್ಯಮಿಯಾಗಿ ನಿಂತಿದ್ದಾರೆ. 

ನಂಬಿಕೆ ಮತ್ತು ವಿಶ್ವಾಸ ದಿಂದ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ಇವರು  ಸಾಕ್ಷಿ.  ತೆಂಗಿನ ಕಲ್ಪನೆ ಇಟ್ಟುಕೊಂಡು ಕೇವಲ ಎರಡು ವರ್ಷಗಳಲ್ಲಿ  ಉದ್ಯಮವೊಂದನ್ನು ಕಟ್ಟಿ ಬೆಳೆಸಿದ ಪರಿ ನಿಜಕ್ಕೂ ಅಚ್ಚರಿ. ಅವರ ಉದ್ಯಮ ಕ್ಷೇತ್ರದಲ್ಲಿ  ಬೆಳೆದು ಬಂದ ಹಾದಿಯನ್ನು `ಭೀಮ ವಿಜಯ’ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಹಾಸನದ ಬಿ. ಕಾಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ  ಹಸಿ ತೆಂಗಿನ ಕಾಯಿಂದ ಉತ್ಪಾದನೆಯಾಗುವ ಎಣ್ಣೆ ಉದ್ಯಮ ಇಂದು ಹತ್ತಾರು ಜನಕ್ಕೆ ಉದ್ಯೋಗ ನೀಡಿದೆ. ತೆಂಗಿಗೆ ವಿಭಿನ್ನತೆ  ತಂದುಕೊಟ್ಟಿದ್ದು,  ಸಧ್ಯ ಇಲ್ಲಿ ತಯಾರಾಗುವ `ವರ್ಜಿನ್ ಕೊಕನೆಟ್ ಆಯಿಲ್’  ಇಂದು ಬ್ರಾಂಡ್ ಆಗಿ ರಾಜ್ಯಾದ್ಯಂತ ಮಾರ್ಕೆಟ್   ವೃದ್ದಿಸಿಕೊಂಡಿದೆ. 

ಹಸಿ ತೆಂಗಿನ  ಕಾಯಿಯಿಂದ ತಯಾರಾಗುವ ಹರಳಣ್ಣೆ ಹಾಗೂ ಇತರೆ ಪ್ರಾಡಕ್ಟ್ ಗಳು ಇಂದು ಹಾಸನ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿ ವೃದ್ದಿಸಿಕೊಂಡಿದ್ದು ತನ್ನದೇ ಆದ ಬೇಡಿಕೆ ಸೃಷ್ಟಿಸಿದ್ದು ಹೆಸರು ಮಾಡುತ್ತಿದೆ.

20 ಲಕ್ಷ ರೂಪಾಯಿ ಮೂಲ ಬಂಡವಾಳ:

ಈ ಉದ್ಯಮ ಮಾಡಬೇಕೆಂದು ಕನಸಲ್ಲೂ ಯೋಚಿಸಿದವರಲ್ಲ. ಆರಂಭದಲ್ಲಿ ಅಡಿಕೆ ಪ್ಲೇಟ್… ಪ್ಲಾಸ್ಟಿಕ್ ಲೋಟ ಇಂತಹವುಗಳ ಬಗ್ಗೆ ಒಲವಿತ್ತು  ಕೊನೆಗೆ  ಕೈ ಹಿಡಿದಿದ್ದು ತೆಂಗಿನ ಕಾಯಿ . ನಾನು ಹಾಗೂ ಗೆಳೆಯ ಆಕಾಶ್  ತಲಾ 10 ಲಕ್ಷ ರೂಪಾಯಿ ಹಾಕಿಕೊಂಡು ಆರಂಭಿಸಿದ್ದು. ನಂತರ ಅದು ಕೊನೆಗೆ ಬಂದು ನಿಂತಿದ್ದು 84 ಲಕ್ಷ ರೂಪಾಯಿಗೆ. ಇದಕ್ಕಾಗಿ  ಬ್ಯಾಂಕ್ ಸಾಲ ಮಾಡಿದೆವು. ಇನ್ನು ನನ್ನ ಗುರುಗಳು ಒಳಗೊಂಡಂತೆ ಸ್ನೇಹಿತರ ನೆರವು ಸಿಕ್ಕಿತು. ಅವರ ನೆರವಿನಿಂದ ಇಂದು ನಮ್ಮ ಬ್ರಾಂಡ್ ಇಷ್ಟೆತ್ತರಕ್ಕೆ ಬಂದು ನಿಂತಿದೆ. ಇದಕ್ಕಾಗಿ ನಾವು ಹಗಲು ರಾತ್ರಿ  ಶ್ರಮ ಹಾಕಿದ್ದೇವೆ. ಇಂದಿಗೂ ನಾನು ಮಾಲೀಕ ಎಂದು ಹೇಳಿಕೊಳ್ಳುವುದಿಲ್ಲ. ನಾನೊಬ್ಬ ಕೆಲಸಗಾರ. ನಮ್ಮಲ್ಲಿ ಸೋಮಾರಿತನ, ಅಲಸ್ಯ ಒಂದು ಖಾಯಿಲೆಯಾಗಿದೆ.  ಇದೊಂದು ಇಲ್ಲದಿದ್ದರೆ ಖಂಡಿತಾ ಯಾರೂ ಭೇಕಾದರೂ ಮಾಲೀಕರಾಗಬಹುದು. ಯಶಸ್ವಿ ಉದ್ಯಮಿಗಳಾಗಬಹುದು.  ನಮ್ಮಲ್ಲಿ ತಯಾರಿರುವ  ತೆಂಗಿನ ಎಣ್ಣೆ ರುಚಿ ಚೆನ್ನಾಗಿದೆ. ತೆಂಗಿನ ಕಾಯಿಯಲ್ಲಿ  ತುಂಬಾ ತೆಳು ಹಾಗೂ ಆರೋಗ್ಯ ಕ್ಕೆ ಒಳ್ಳೆಯದು ಮೆಡಿಕಲ್ ಪ್ರಕಾರ  ಗ್ಯಾಸ್ಟ್ರಿಕ್, ಡೈಜೆಷನ್, ಹುಳಿ  ತೇಗು ಬರುವುದು ಎಲ್ಲದಕ್ಕೂ ಇದರಿಂದ ಪರಿಹಾರವಿದ್ದು ಕೋವಿಡ್ ನಂತರವಂತೂ ನಮ್ಮ ಪ್ರಾಡಕ್ಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾಸನದ ಮಟ್ಟಿಗೆ ನಾವು ಅತ್ಯಂತ ಸುಸಜ್ಜಿತ ಹಾಗೂ ಆಧುನೀಕರಗೊಂಡಿರುವ  ಉದ್ಯಮ ನಡೆಸುತ್ತಿದ್ದೇವೆ ಎನ್ನುತ್ತಾರೆ ಹರೀಶ್ ಗೌಡ .

ಲೋಕಲ್ ಫಾರ್ ಓಕಲ್ :

ನನ್ನ ತಂದೆ ಶಿವಣ್ಣ ಆಡಿಟರ್ ತಾಯಿ  ಗಾಯತ್ರಿ  ಇವರ ಸಹಕಾರದಿಂದಲೇ ಇಲ್ಲಿಗೆ ಬರಲು ಕಾರಣ. ಆರಂಭದಲ್ಲಿ ಹಠಕ್ಕೆ ಬಿದ್ದು ಮಾಡಿದ್ದೆವು ಆರಂಭಿಸಿದ ನಂತರ  ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ.  ಸ್ಥಳೀಯರೇ ನಮ್ಮ ಕಸ್ಟಮರ್ ನಮ್ಮ ಪ್ರಾಡಕ್ಟ್ ದ್ಯೇಯವೇ `ವೋಕಲ್ ಫಾರ್ ಲೋಕಲ್ ‘   ದುರಂತ ಎಂದರೆ ನಮ್ಮ ಜನ ತೆಂಗಿನ ಕಾಯಿ ಎಣ್ಣೆಯನ್ನು ಕೇವಲ ತಲೆಗೆ ಮಾತ್ರ ಎಂದುಕೊಂಡಿದ್ದಾರೆ. ಬಾಡಿಗೆಗೆ ತೆಗೆದುಕೊಂಡಂತೆ ಆಡುತ್ತಾರೆ. ಆದರೆ ಈಗದು ತಲೆ ಅಲ್ಲ ಇಡೀ ದೇಹಕ್ಕೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.   ನಾವು ನಮ್ಮ ಪ್ರಾಡಕ್ಟನ್ನು ಎಲ್ಲಿ ರೀಚ್  ಆಗಬೇಕೊ ಅಲ್ಲಿಗೆ  ಮಾಡುತ್ತಿದ್ದೇವೆ. ಸಧ್ಯ ನಾವು ಸೇಫ್ ಜೋನ್ ನಲಿದ್ದೇವೆ.  ಅದಕ್ಕಾಗಿ ಪ್ರತಿ ದಿನವೂ ಶ್ರಮ  ಹಾಕುತ್ತೇವೆ.

ನಾವು ಕ್ರೆಡಿಟ್ ಕೊಡುತ್ತೇವೆ…

ಹೊಸದಾಗಿ ಉದ್ಯಮಕ್ಕೆ ಬರುವವರು ಖಂಡಿತಾ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಬನ್ನಿ. ಮುನ್ನುಗ್ಗಿ  ನಾವು ಸಹಾಯ ಮಾಡುತ್ತೇವೆ ಎನ್ನುತ್ತಾರೆ ಹರೀಶ್. ಉದ್ಯಮಿಗಳಾಗಲು  ಮನೆಯಲ್ಲಿ ಕನ್ವಿನ್ಸ್ ಮಾಡಿ  ಖಂಡಿತಾ ಅವರು ಸಹಾಯ ಮಾಡುತ್ತಾರೆ.  ನಾನು ಈ ಹಂತಕ್ಕೆ ಬರಲು ಎರಡು ವರ್ಷ ಕಾದಿದ್ದೇನೆ ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಹೊಸಬರು ಬಂದರೆ ನಾವು ಸಹಕಾರ ನೀಡುತ್ತೇವೆ. ನಮ್ಮ ಪ್ರಾಡಕ್ಟ್ ನಾವು ಕ್ರೆಡಿಟ್ ಕೊಡುತ್ತೇವೆ. ಒಮ್ಮೆ ಉದ್ಯಮಿ ಆದ ತಕ್ಷಣ ಯಶಸಸ್ಸನ್ನು ನೆತ್ತಿಗೆ ಏರಿಸಿಕೊಳ್ಳಬಾರದು. ನಾನು ಹಾಗಾಗಿಯೇ ಇಂದಿಗೂ ನನ್ನ ತಾತನ ಹಳೇ ಚೇರ್ ನಲ್ಲೇ ಕೂರುತ್ತೇನೆ. ನಾವು ಉದ್ಯಮ ಆರಂಭಿಸುವಾಗ ನನ್ನ ಮೇಲಿನ ನಂಬಿಕೆಯಿಂದ ನನ್ನ ಗುರುಗಳೇ ನನಗೆ ಈ ಜಾಗವನ್ನು ಬಾಡಿಗೆಗೆ ಕೊಡಿಸಿದರು. ಅವರ ನಂಬಿಕೆ ಉಳಿಸಿಕೊಂಡು ಈ ಹಂತ ತಲುಪಿದ್ದೇನೆ  ಎನ್ನುತ್ತಾರೆ ಹರೀಶ್ ಗೌಡ

ಮ್ಯಕಾನಿಕಲ್ ಎಂಜಿನಿಯರಿಂಗ್ ಓದಿ

ತೆಂಗಿನ ಕಾಯಿಯಲ್ಲಿ ದುಡಿಮೆ ಕಂಡಿದ್ದು

ನಿಜ …ಸರ್ಕಾರಿ ಕೆಲಸ ಹುಡುಕುವರ ನಡುವೆ ಚಿಕ್ಕ ವಯಸ್ಸಿನಲ್ಲೇ  ಸ್ವಂತ ದುಡಿಮೆ ಮೂಲಕ ಉದ್ಯಮಕ್ಕೆ ಕಾಲಿಟ್ಟ  ಹರೀಶ್ ವಿಭಿನ್ನವಾಗಿ ಕಾಣುತ್ತಾರೆ.  ಅನೇಕ ಯುವಕರು ಸರ್ಕಾರಿ ಕೆಲಸಕ್ಕಾಗಿ ಹಾತೊರೆಯುತ್ತಾರೆ.  ಕೆಲಸ ಸಿಗದಿದ್ದರೆ ನಿರುದ್ಯೋಗ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ನಿರುದ್ಯೋಗ ಸಮಸ್ಯೆಯಲ್ಲಿ ಸವಾಲಾಗಿ ಸ್ವೀಕರಿಸುವವರು ನಮ್ಮ ನಡುವೆ ವಿರಳ.   ಸ್ವ-ಉದ್ಯೋಗದಲ್ಲಿ ಬದುಕನ್ನು ಕಟ್ಟಿಕೊಂಡು ಮಾದರಿಯಾಗಿರುತ್ತಾರೆ.  ಅಂಥವರ ಸಾಲಿಗೆ ಇಂಜಿನಿಯರಿಂಗ್ ಪದವೀಧರ ಹರೀಶ್ ಗೌಡ ಕೂಡ ಒಬ್ಬರು.

ತಾಲೂಕಿನ ಮೊಸಳೆ ಹಳ್ಳಿ ಗ್ರಾಮದ ಹರೀಶ್ ಗೌಡ ಓದಿದ್ದು ನಗರದ ಎಂಸಿಎ ಕಾಲೇಜಿನಲ್ಲಿ.  ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಗಳಿಸಿದರು.  ಸರ್ಕಾರಿ ಕೆಲಸಕ್ಕೆ ಇವರು ಮನಸ್ಸು ಮಾಡಲಿಲ್ಲ.  ಪದವಿ ಮುಗಿಸಿದ ತಕ್ಷಣ ಇವರು ಕೈಕಟ್ಟಿ ಕೂರಲಿಲ್ಲ.  ಕಷ್ಟಪಟ್ಟು ಕೆಲಸ ಮಾಡಿದರು.  ಇವರು ಹಸಿ ತೆಂಗಿನಕಾಯಿ ಎಣ್ಣೆ ಉತ್ಪಾದನೆಗೆ ಸಂಬಂಧಿಸಿದಂತೆ ಆಲೋಚಿಸಿ ಹೆಜ್ಜೆ ಇಟ್ಟರು . 

ಒಂದು ವರ್ಷ ಅಧ್ಯಯನ

ಗೌರಿಪುರದ ಅನಂತರಾಜು ಹಾಗೂ ಹೇಮಾ ಅವರ ಮಾರ್ಗದರ್ಶನವನ್ನು ಪಡೆದುಕೊಂಡರು.  ಹಸಿ ತೆಂಗಿನಕಾಯಿ ಎಣ್ಣೆ ಬಗ್ಗೆ ಸಂಶೋಧನೆ ಮಾಡತೊಡಗಿದರು.  ಪರಿಶುದ್ಧ ಹಸಿ ತೆಂಗಿನಕಾಯಿ ಎಣ್ಣೆ ಈಗ ಎಲ್ಲೋ ಕಾಣಸಿಗದು.  ಇದನ್ನೇ ಉತ್ಪಾದಿಸಿ ಉದ್ಯಮವನ್ನಾಗಿಸಿದರೆ ಹೇಗೆ ಎಂಬ ಆಲೋಚನೆ ಕೂಡ ಇವರಿಗೆ ಹೊಳೆಯಿತು.    ಇದಕ್ಕೆ ಬಂಡವಾಳ ಇತ್ಯಾದಿ ಕೂಡ ಅಗತ್ಯವಿತ್ತು.  ತೆಂಗಿನಕಾಯಿ ಎಣ್ಣೆ ಉತ್ಪಾದನೆ

ಬಗ್ಗೆ ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿದರು.  ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೊಬ್ಬರಿಎಣ್ಣೆ ಸಿಗುತ್ತದೆ.  ಆದರೆ ಹಸಿ ತೆಂಗಿನಕಾಯಿ ಎಣ್ಣೆ ಉತ್ಪಾದಿಸಲು ಆರಂಭಿಸಿರುವುದು ಜಿಲ್ಲೆಯಲ್ಲಿ ಇದೇ ಪ್ರಥಮ. 

ವಿಜ್ಞಾನಿ ಡಾ.ಸಂದೇಶ್ ಅವರು ಹರೀಶ್ ಗೌಡ ಅವರಿಗೆ ಉತ್ಪಾದನೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಿದ್ದರು.

ತೆಂಗಿನ ಕಾಯಿಯನ್ನೇ ಬಂಡಬಾಳ ಮಾಡಿಕೊಂಡೆ…

ಕೃಷಿ ಪ್ರಧಾನ ಜಿಲ್ಲೆಯಲ್ಲಿ ತೆಂಗಿನಕಾಯಿ ದೊರೆಯುತ್ತದೆ.  ಇದನ್ನೇ ಬಂಡವಾಳವನ್ನಾಗಿಸಿ ಕೊಳ್ಳಬಾರದು ಏಕೆ ಎಂಬ ಜಿಲ್ಲೆಯಲ್ಲಿ ಹಸಿ ತೆಂಗಿನಕಾಯಿ ಎಣ್ಣೆ ಉತ್ಪಾದಿಸಬೇಕು ಎಂದು ಆಲೋಚಿಸಿದೆ.  ಉದ್ಯೋಗದ ಪರಿಕಲ್ಪನೆಯನ್ನು ಹೊಂದಿದ್ದೆ.  ವೈಜ್ಞಾನಿಕವಾಗಿ ಎಣ್ಣೆ ಉತ್ಪಾದಿಸಲಾಗುತ್ತಿದೆ.  ಹಂತಹಂತವಾಗಿ ಬೇಡಿಕೆಯೂ ಹೆಚ್ಚುತ್ತಿದೆ.

ಹರೀಶ್ ಗೌಡ ಉದ್ಯಮಿ. –

ಯಾವುದಕ್ಕೆ ಬಳಕೆಯಾಗುತ್ತಿದೆ ಉತ್ಪನ್ನ :

ಪರಿಶುದ್ಧ ಅತಿ ತೆಂಗಿನಕಾಯಿ ಎಣ್ಣೆಯನ್ನು ಅಡುಗೆಗೆ ಬಳಕೆ ಮಾಡಿಕೊಳ್ಳಬಹುದು.  ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಆರೋಗ್ಯ ಚೆನ್ನಾಗಿರುತ್ತದೆ.  ಹಸಿ ತೆಂಗಿನಕಾಯಿ ಎಣ್ಣೆ ತಾಯಿ ಎದೆ ಹಾಲಿಗೆ ಸಮ.  ಸಂಶೋಧಕರಿಗೆ ತೆಂಗು ಬೆಳೆಗಾರರು ಕೂಡ ಹಿಂದಿನಿಂದಲೂ ಇದನ್ನೇ ಪ್ರತಿಪಾದಿಸುತ್ತಾರೆ.  ಇನ್ನು ಸ್ನಾನದ ನಂತರ ಮೈಯಿಗೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡರೆ ಇಡೀ ದಿವಸ ಯಾವುದೇ ಕಿರಿಕಿರಿ ಇಲ್ಲದೆ ಉಲ್ಲಾಸಭರಿತವಾಗಿರಬಹುದು.  ತಲೆಕೂದಲಿಗೂ ಬಳಸಿಕೊಳ್ಳಬಹುದು.  ಇದರಿಂದ ಬಾಯಿ ಮುಕ್ಕಳಿಸುವುದರಿಂದ ದುರ್ವಾಸನೆ ಮತ್ತು ಬ್ಯಾಕ್ಟೀರಿಯವನ್ನು ಹೊಡೆದೋಡಿಸಬಹುದು ಎನ್ನುತ್ತಾರೆ ಹರೀಶ್ ಗೌಡ

ಸದ್ಯ ಅರ್ಧ ಲೀಟರ್ ಗೆ 300 ರೂ.,  ಮುಕ್ಕಾಲು ಲೀಟರ್ ಗೆ   450 ರೂ. ,  ಒಂದು ಲೀಟರಿಗೆ 550 ರೂ.  ದರ ನಿಗದಿಪಡಿಸಲಾಗಿದೆ.  ಮಾರುಕಟ್ಟೆ ಕೂಡಾ ಸಿಗುತ್ತಿದೆ. ಬೇರೆಬೇರೆ ಭಾಗಗಳಿಂದಲೂ ಬೇಡಿಕೆ ಇದೆ.  ಇದನ್ನು ಪೂರೈಸುವ ಕಡೆ ಆಲೋಚಿಸಿದ್ದೇನೆ.  ಸೇವಾಮನೋಭಾವ ಸೇರಿದಂತೆ ಲಾಭದತ್ತ ಉದ್ದಿಮೆಯನ್ನು ಕೊಂಡೊಯ್ಯುವುದು ತನ್ನ ಅಭಿಲಾಷೆ ಎನ್ನುತ್ತಾರೆ.

ತೆಂಗಿನ  ಬೆಳೆಗಾರರಿಗೆ ಆದ್ಯತೆ

ಸ್ವಂತ ಜೀವನ ಕಟ್ಟಿಕೊಳ್ಳಬೇಕೆಂಬ ಆಸೆ ಹರೀಶ್ ಗೌಡರಿರು  ಕೆಲವೇ ವರ್ಷಗಳಲ್ಲಿ ಅಂದುಕೊಂಡಿದ್ದನ್ನು ಅವರು ಸಾಧಿಸಿದ್ದಾರೆ.  ಉದ್ಯೋಗದಲ್ಲಿ ಯಶಸ್ಸು ಗಳಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡಿದ್ದಾರೆ.  ತೆಂಗು ಬೆಳೆಗಾರರು ನೇರವಾಗಿ ತೆಂಗಿನಕಾಯಿ ತಂದರೆ ಎಣ್ಣೆ ಮಾಡಿಕೊಡಲಾಗುವುದು.  ರೈತರ ಹಿತದೃಷ್ಟಿಯಿಂದ ಉದ್ಯಮ ಸ್ಥಾಪಿಸಲಾಗಿದೆ.  ಇಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.  ಖುದ್ದು ಅವರೇ ರೈತರ ಮನೆ ಬಾಗಿಲಿಗೆ ವಾರದ ಸಂತೆ ಗಳಿಗೆ ತೆರಳಿ ದೊಡ್ಡಪ್ರಮಾಣದಲ್ಲಿ ತೆಂಗಿನಕಾಯಿ ಖರೀದಿಸುತ್ತೇನೆ.  ನಂತರ ಇದನ್ನು ಉತ್ಪಾದನೆಗೆ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ .

ಹರೀಶ್ ಗೌಡ ಅವರ  ಸಂಪರ್ಕ ಸಂಖ್ಯೆ : 99169 52312

#supportlocal #supportsmallbusinesses #harishgowda #coconutoil #nector #hassan #coconut

LEAVE A REPLY

Please enter your comment!
Please enter your name here