ನವದೆಹಲಿ: ಕೇಂದ್ರ ಸರ್ಕಾರ ಅನ್ಲಾಕ್ 5ರ ಮಾರ್ಗಸೂಚಿ ಪ್ರಕಟಿಸಿದ್ದು, ಚಿತ್ರಮಂದಿರ ಮತ್ತು ಈಜುಕೊಳ ತೆರೆಯಲು ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಬಹುತೇಕ ಚಟುವಟಿಕೆಗಳಿಗೆ ಅಕ್ಟೋಬರ್ 15ರ ನಂತ್ರವೇ ಗ್ರೀನ್ ಸಿಗ್ನಲ್ ನೀಡಿದೆ. ಹಾಗೇ ಸರ್ಕಾರ ಮೈಕ್ರೋ ಲೆವಲ್ ಕಂಟೈನ್ಮೆಂಟ್ ಝೋನ್ ಮಾಡಲು ಜಿಲ್ಲಾಡಳಿತಗಳಿಗೆ ಅವಕಾಶ ನೀಡಿದೆ.
ಅಕ್ಟೋಬರ್ 15ರ ನಂತರ ಗ್ರೀನ್ ಸಿಗ್ನಲ್:
* ಚಿತ್ರಮಂದಿರ/ಸಿಂಗಲ್ ಸ್ಕ್ರೀನ್/ಮಲ್ಟಿಫ್ಲೆಕ್ಸ್ ಗಳನ್ನು ಶೇ.50ರಷ್ಟು ಆಸನ ಸಾಮರ್ಥ್ಯದಲ್ಲಿ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಸಿಬ್ಬಂದಿ ಕೊರೊನಾಗೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯ.
* ಬಿ2ಬಿ ಬ್ಯುಸಿನೆಸ್ ಗೆ ಸಂಬಂಧಿಸಿದ ಪ್ರದರ್ಶನ ನಡೆಸಲು ಅನುಮತಿ
* ಕೇವಲ ಕ್ರೀಡಾಪಟುಗಳಿಗೆ ಈಜುಕೊಳ ತೆರೆಯಬಹುದಾಗಿದೆ.
* ಪಾರ್ಕ್ ಸೇರಿದಂತೆ ಇತರೆ ಮನರಂಜನಾ ಕೇಂದ್ರಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಅಕ್ಟೋಬರ್ 15ರ ನಂತರವೇ ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆ ಮತ್ತು ತರಬೇತಿ ಕೇಂದ್ರ ಆರಂಭಿಸುವ ಕುರಿತು ಪ್ಲಾನ್ ಮಾಡಿಕೊಳ್ಳಬೇಕಿದೆ. ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಶಾಲಾ-ಕಾಲೇಜು ಪುನರಾಂಭಕ್ಕೆ ಕೆಲವು ಮಾರ್ಗಸೂಚಿಗಳನ್ನು ಸರ್ಕಾರ ಸೂಚಿಸಿದೆ.
* ಆನ್ಲೈನ್/ಡಿಸ್ಟನ್ಸ್ ಪಾಠ ಮುಂದುವರಿಸುವುದು ಮತ್ತು ಪ್ರೋತ್ಸಾಹಿಸುವುದು.
* ಕೆಲ ವಿದ್ಯಾರ್ಥಿಗಳು ಶಾಲೆಗೆ ಬರಲು ಇಷ್ಟಪಡುತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಪೋಷಕರಿಂದ ಲಿಖಿತ ರೂಪದಲ್ಲಿ ಅನುಮತಿ ಪತ್ರ ಪಡೆದಿರಬೇಕು.
* ಶಾಲೆಗಳು ಮಕ್ಕಳಿಗೆ ಹಾಜರಾತಿ ಕಡ್ಡಾಯವೆಂದು ಸೂಚಿಸುವಂತಿಲ್ಲ.
* ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಆಕ್ಟೋಬರ್ 15ರ ನಂತರವೇ ಕಾಲೇಜುಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಸ್ನಾತಕೋತ್ತರ ಮತ್ತು ಪ್ರಯೋಗಾಲಯದ ವಿದ್ಯಾರ್ಥಿಗಳ ಪ್ರವೇಶಕ್ಕೆ ಯುನಿವರ್ಸಿಟಿಗಳು ಅನುಮತಿ ನೀಡುವುದು.
ಸಾಮಾಜಿಕ/ಸಾಂಸ್ಕೃತಿಕ/ ಶೈಕ್ಷಣಿಕ/ಕ್ರೀಡೆ/ಮನರಂಜನಾ/ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಕೇವಲ ನೂರು ಜನರು ಭಾಗವಹಿಸಲು ಅನುಮತಿ ನೀಡಲಾಗಿತ್ತು. ಈಗ ವಿನಾಯ್ತಿ ನೀಡಿ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗಿದೆ. ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಫೇಸ್ ಮಾಸ್ಕ್ ಕಡ್ಡಾಯ. ಸಭಾಂಗಣದ ಸಾಮರ್ಥ್ಯದ ಶೇ. 50 ರಷ್ಟು ಜನರಿಗೆ ಮಾತ್ರ ಎಂಟ್ರಿ ನೀಡುವುದು. ಅಕ್ಟೋಬರ್ 15ರಿಂದ ಶೇ.50ರಷ್ಟು ಸಾಮರ್ಥ್ಯದಲ್ಲಿ ಹಾಲ್ ತುಂಬಬಹುದು. ಆದ್ರೆ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರ ಸಂಖ್ಯೆ ಇನ್ನೂರು ಮೀರುವಂತಿಲ್ಲ. ಒಂದು ವೇಳೆ ಇದೇ ಕಾರ್ಯಕ್ರಮ ಹೊರಾಂಗಣದಲ್ಲಿ ನಡೆಯುತ್ತಿದ್ರೆ ಸಾಮಾಜಿಕ ಅಂತರ ಪಾಲಿಸಿ ಹೆಚ್ಚು ಜನರು ಸೇರಬಹುದು. ಮಾಸ್ಕ್, ಸ್ಯಾನಿಟೈಸರ್ ಅಥವಾ ಹ್ಯಾಂಡ್ ವಾಶ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿ ಇರಲೇಬೇಕು.
ಈ ಲಾಕ್ಡೌನ್ ಅಕ್ಟೋಬರ್ 31, 2020ರವರೆಗೆ ಮುಂದುವರಿಯಲಿದೆ. ರಾಜ್ಯ/ಕೇಂದ್ರ ಸರ್ಕಾರ ಯಾವುದೇ ಲೋಕಲ್ ಲಾಕ್ಡೌನ್ ಮಾಡುತ್ತಿಲ್ಲ. ಜಿಲ್ಲಾಡಳಿತಗಳು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಮೈಕ್ರೋ ಲೆವಲ್ ಝೋನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಅವಶ್ಯಕ ಸೇವೆಗಳನ್ನು ಹೊರತುಪಡಿಸಿದ ಇನ್ನುಳಿದ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧವಿದೆ. ಅಂತರಾಜ್ಯ ಮತ್ತು ಅಂತರ್ ಜಿಲ್ಲೆ ಪ್ರಯಾಣದ ಮೇಲೆ ಯಾವುದೇ ನಿಬಂಧನೆಗಳಿಲ್ಲ.