ಕಾಲುಬಾಯಿ ರೋಗ ತಡೆಗೆ ಲಸಿಕೆ ನೀಡಿ – ಶಾಸಕ ಸಿಮೆಂಟ್ ಮಂಜು

0

ರೈತರು ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಂಡು, ಕಾಲು ಬಾಯಿ ಜ್ವರ ರೋಗ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಬಾಳ್ಳುಪೇಟೆ ಗ್ರಾಮದ ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅವರಣದಲ್ಲಿ ಬುಧುವಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಹಮ್ಮಿಕೊಂಡ ಜಾನುವಾರುಗಳ ಕಾಲು ಬಾಯಿ ರೋಗ ಲಸಿಕೆ ನೀಡುವ ರಾಷ್ಟಿಯ ಕಾರ್ಯಕ್ರಮಕ್ಕೆ ಹಸುಗಳಿಗೆ ಪೂಜೆ ಮಾಡಿ, ಚಾಲನೆ ನೀಡಿ ಮಾತನಾಡಿ, ಕಾಲು ಬಾಯಿ ರೋಗ ಬರದಂತೆ ಪಶು ಸಂಗೋಪನ ಇಲಾಖೆಯಿಂದ ಉಚಿತವಾಗಿ ನೀಡುತ್ತಿರುವ ಲಸಿಕೆ ಹಾಕಿಸಿ ಮುನ್ನೆಚ್ಚರಿಕೆ ವಹಿಸಬೇಕು. ಇಲಾಖೆ ಸಿಬ್ಬಂದಿ ಹೆಚ್ಚಿನ ಪ್ರಚಾರದ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದರು.

ಸರ್ಕಾರದಿಂದ ಆಯೋಜನೆ ಮಾಡಿರುವ ಲಸಿಕಾ ಕಾರ್ಯಕ್ರಮ ಯಶಸ್ಸು ಮಾಡಲು ಎಲ್ಲರೂ ಕೈ ಜೋಡಿಸಬೇಕು. ಜಾನುವಾರುಗಳಿಗೆ ಬಾಧಿಸುವ ಮಾರಕ ವೈರಸ್ ರೋಗವಾಗಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತದೆ. ಆದ್ದರಿಂದ ಲಸಿಕೆಯೇ ರೋಗ ತಡೆಗಟ್ಟಲು ಇರುವ ಮಾರ್ಗ ಎಂದು ಹೇಳಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಜಾನುವಾರುಗಳನ್ನು ಮಾರಕವಾಗಿ ಕಾಡುತ್ತಿರುವ ಕಾಲುಬಾಯಿ ಜ್ವರ ತಡೆಗೆ ಮುಂದಾಗಿರುವ ಜಿಲ್ಲಾಡಳಿತ, ಅದಕ್ಕಾಗಿ ಒಂದು ತಿಂಗಳ ಲಸಿಕೆ ಅಭಿಯಾನ ಆರಂಭಿಸಿದೆ. ಇಂದಿನಿಂದ (ಸೆ. 26) ಶುರುವಾಗಿರುವ ಅಭಿಯಾನವು ಅ. 25ರವರೆಗೆ ನಡೆಯಲಿದೆ. ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ (ಎನ್‌ಎಡಿಸಿಪಿ) ಯೋಜನೆಯಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ನಾಲ್ಕನೇ ಸುತ್ತಿನ ಅಭಿಯಾನ ಇದಾಗಿದೆ. ರೈತರು, ತಾವು ಸಾಕಿರುವ ದನಗಳು ಮತ್ತು ಎಮ್ಮೆಗಳಿಗೆ ಲಸಿಕೆ ಹಾಕಿಸುವ ಮೂಲಕ, ಮಾರಕ ಜ್ವರದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಮ್ಮ, ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರಕಾಶ್, ಗ್ರಾಪಂ ಉಪಾಧ್ಯಕ್ಷ ಸ್ವಾಮಿ, ಸದಸ್ಯರಾದ ಸಂಜು, ರೋಹಿತ್, ಪಶು ವೈದ್ಯರಾದ ನಿತ್ಯಾನಂದ ಸೇರಿದಂತೆ ಮುಂತಾದರಿದ್ದರು.

LEAVE A REPLY

Please enter your comment!
Please enter your name here