ಪತ್ನಿ ಹತ್ಯೆಗೈದು ಮರಳ ರಾಶಿಯಲ್ಲಿ ಶವ ಹೂತಿಟ್ಟಿದ್ದಭೂಪ ಐದು ತಿಂಗಳ ಬಳಿಕ ಸರೆ ಸಿಕ್ಕ!

0

ಹಾಸನ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ಕೊಲೆ ಮಾಡಿ ಮರಳು ರಾಶಿಯಲ್ಲಿ ಶವ ಹೂತಿಟ್ಟಿದ್ದ ಪ್ರಕರಣವನ್ನು ಆಲೂರು ಪೊಲೀಸರು ಭೇದಿಸಿದ್ದು ಆಕೆಯ ಪತಿಯನ್ನು ಗುರುವಾರ ಬಂಧಿಸಿದ್ದಾರೆ.

ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಚೋಕನಹಳ್ಳಿ ಗ್ರಾಮದ ಸಿ.ಆರ್. ಮಂಜುನಾಥ್ (36) ಬಂಧಿತ ಆರೋಪಿ. ಜುಲೈ 19 ರಂದು ಪತ್ನಿ ಸುಮಿತ್ರಾ ಅವರನ್ನು ಕೊಲೆ ಮಾಡಿ ಆಲೂರು ತಾಲೂಕು ಈಶ್ವರಹಳ್ಳಿ ಕೂಡಿಗೆ ಬಳಿಯ ಬಿ.ಎ. ಯೂಸುಫ್ ಎಂಬವರಿಗೆ ಸೇರಿದ್ದ ಮರಳು ರಾಶಿಯಲ್ಲಿ ಶವ ಮುಚ್ಚಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಂಗಳೂರಿನ ಪರಪ್ಪನ ಅಗ್ರಹಾರ ನಿವಾಸಿ ಸುಮಿತ್ರಾ ಹಾಗೂ ಸಿ.ಆರ್. ಮಂಜುನಾಥ್ ಪರಸ್ಪರ ಪ್ರೀತಿಸಿ 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಐದು ತಿಂಗಳಿಂದ ಸುಮಿತ್ರಾ ಕಾಣೆಯಾಗಿರುವ ಕುರಿತು ಯಾರಿಂದಲೂ ದೂರು ಬಂದಿರಲಿಲ್ಲ. ಹೀಗಾಗಿ ಪ್ರಕರಣ ಭೇದಿಸುವುದು ಕಷ್ಟವಾಗಿತ್ತು ಎಂದರು.

ಸುಮಿತ್ರಾ ಹಾಗೂ ಮಂಜುನಾಥ್ ಅವರದ್ದು ಪ್ರೇಮ ವಿವಾಹ, ಐದು ತಿಂಗಳಿಂದ ಮಗಳು ಸಂಪರ್ಕಕ್ಕೆ ಬಾರದಿದ್ದರೂ ಆಕೆಯ ಪಾಲಕರು ದೂರು ನೀಡಿಲ್ಲ ಎಂದು ಎಸ್ಪಿ ತಿಳಿಸಿದರು.

ಸುಮಿತ್ರಾ ಹತ್ಯೆಯಾಗಿರುವ ವಿಚಾರವನ್ನು ಅವರಿಗೆ ಈಗಷ್ಟೇ ತಿಳಿಸಲಾಗಿದೆ. ಪತ್ನಿಯ ಕೊಲೆಯನ್ನು ಒಬ್ಬನೇ ಮಾಡಿದ್ದಾನೋ ಅಥವಾ ಬೇರೆ ಯಾರಾದರೂ ಸಹಕರಿಸಿದ್ದಾರೆಯೇ ಎಂಬುದು ಗೊತ್ತಾಗಿಲ್ಲ. ಆಕೆ ಅನೈತಿಕ ಸಂಬಂಧ ಹೊಂದಿದ್ದಳೋ ಅಥವಾ ಇತನೇ ಸುಳ್ಳು ಹೇಳುತ್ತಿದ್ದಾನೋ ಎಂಬುದರ ಕುರಿತು ತಿಳಿಯಬೇಕಿದೆ ಎಂದರು.

LEAVE A REPLY

Please enter your comment!
Please enter your name here