ಹಾಸನ ಮಾ.19 (ಹಾಸನ್_ನ್ಯೂಸ್ !, ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂದಿಸಿದಂತೆ ಪ್ರಾಥಮಿಕ ಹಂತದ ತುರ್ತು ಕಾಮಗಾರಿಗಳಿಗೆ ಬೇಕಾಗಿರುವ ಅನುದಾನವನ್ನು ಶೀಘ್ರವಾಗಿ ಒದಗಿಸಲಾಗುವುದು ಎಂದು ಇಂಧನ ಮತ್ತು ಮೂಲಭೂತ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಸನದ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಆದಷ್ಟು ಶೀಘ್ರವಾಗಿ ವಿಮಾನ ನಿಲ್ದಾಣ ಕಾಮಾಗಾರಿಯು ಪ್ರಾರಂಭವಾಗಬೇಕಿದ್ದು, ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಶೀಘ್ರವಾಗಿ ಮಾಡುವಂತೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ಮೂಲಭೂತ ಸೌಕರ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ವಿ.ಚೈತ್ರಾ ಅವರು ಹಾಲಿ 9 ಕಿ.ಮೀ. ವ್ಯಾಪ್ತಿಯಲ್ಲಿರುವ 35 ಮೀಟರ್ ವಿಸ್ತೀರ್ಣದ ಹೈಟೆನ್ಷನ್ ತಂತಿಗಳನ್ನು ಹಾಗೂ ಟವರ್‍ಗಳನ್ನು ತೆಗೆದು 17 ಕಿ.ಮೀ. ದೂರದಿಂದ ವಿದ್ಯುತ್ ಸಂಪರ್ಕ ವಿಸ್ತರಿಸಬೇಕಾಗಿದೆ ಅದಕ್ಕಾಗಿ ತಗಲುವ ವೆಚ್ಚವನ್ನು ಮೂಲಭೂತ ಸೌಕರ್ಯ ಇಲಾಖೆಯಿಂದ ಒದಗಿಸಿ ಕೊಡಬೇಕಾಗಿದ್ದು, ಭೂ ಪರಿಹಾರ ಧನವನ್ನು ಬಿಡುಗಡೆ ಆದಷ್ಟು ಬೇಗ ಮಾಡಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಉದ್ದೇಶಿತ ಪ್ರದೇಶದ ವಿದ್ಯುತ್ ಲೈನ್ ಅನ್ನು ಸ್ಥಳಾಂತರಿಸಲು 7.3ಕೋಟಿ ಭೂ ಪರಿಹಾರಧನ ಸೇರಿ 19.7 ಕೋಟಿ ರೂ ಬಿಡುಗಡೆ ಮಾಡಿಕೊಡುವಂತೆ ಕೋರಲಾಗಿದ್ದು, ಒಟ್ಟಾರೆಯಾಗಿ 34 ಎಕರೆ ಭೂ ಪ್ರದೇಶ ಇದ್ದು ಪರಿಹಾರ ನೀಡಬೇಕು ಎಂದು ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಡಿಕೊಡುವಂತೆ ಕೋರಲಾಗಿದ್ದು ವಿದ್ಯುತ್ ಮಾರ್ಗ ಬದಲಾವಣೆಗೆ ಪರಿಹಾರ ನೀಡಿದ ನಂತರ ರೈತರು ತಮ್ಮ ಜಮೀನನ್ನು ನಿಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳಾದ ಬಿ.ಎ ಜಗದೀಶ್, ಕೆ.ಪಿ.ಟಿ.ಸಿ.ಎಲ್ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ನಾಗಾರ್ಜುನ್, ಸೂಪರ್‍ಡೆಂಟ್ ಇಂಜಿನಿಯರ್ ಉಮೇಶ್, ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೆಶ್, ತಹಶೀಲ್ದಾರ್ ಶಿವಶಂಕರಪ್ಪ ಮತ್ತಿತರರು ಹಾಜರಿದ್ದರು.