ಹಾಸನ : ಬುಕ್ ಮಾಡಿದ್ದ ಐಫೋನ್‌ಗೆ (iPhone) ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ನ ಚಾಕುವಿನಿಂದ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿನಲ್ಲಿ ನಡೆದಿದೆ.
ಫೆಬ್ರವರಿ 11 ರಂದು ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ‍್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅರಸೀಕೆರೆ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಕೊಲೆ ಆರೋಪಿ ಹೇಮಂತ್ ದತ್ತ (20) ಇವನೆ
ಸಿಕ್ಕಿಬಿದ್ದಿದ್ದಾನೆ,
ಕೊಲೆಯಾದ ಹೇಮಂತ್ ನಾಯ್ಕ (23)
ಇವನೇ , ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಹೇಮಂತ್ ದತ್ತ ಕೊಲೆ ಮಾಡಿ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ. ಸದ್ಯ ಈ ಘಟನೆ ಅರಸೀಕೆರೆ ಪಟ್ಟಣದ ಜನರನ್ನು ಬೆಚ್ಚಿಬೀಳಿಸಿದೆ.
ಏನಿದು ಘಟನೆ?
ಮೃತ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 46 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದರಿಂದ ಹೇಮಂತ್ ನಾಯ್ಕ ಫೆಬ್ರವರಿ 7ರಂದು ಅರಸೀಕೆರೆ ಪಟ್ಟಣದ, ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ್ ದತ್ತ ಮನೆಗೆ ಐಫೋನ್ ಡೆಲಿವರಿ ಕೊಡಲು ಬಂದಿದ್ದ. ಅಲ್ಲಿಗೆ ಬಂದೊಡನೆ ಹೇಮಂತ್ ದತ್ತ ಐಫೋನ್ ಬಾಕ್ಸ್ ಅನ್ನು ಪನ್ ಮಾಡುವಂತೆ ಹೇಳಿದ್ದ. ಅದಕ್ಕೆ ಹೇಮಂತ್ ನಾಯ್ಕ ಓಪನ್ ಮಾಡಲು ಆಗಲ್ಲ. ಮಾಡಿದ್ರೆ ಹಿಂದಿರುಗಿಸಿಲು ಸಾಧ್ಯವಿಲ್ಲ, 46 ಸಾವಿರ ಹಣ ಕೊಡಿ ಎಂದು ಕೇಳಿದ್ದ.
ನಂತರ ಹೇಮಂತ್ ದತ್ತ ಇಲ್ಲೇ ಕುಳಿತುಕೊ ಹಣ ಕೊಡುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ಕೊಡಲು ಹಣವಿಲ್ಲದೇ ಮನೆಯೊಳಗೆ ಕುಳಿತು ಮೊಬೈಲ್ ನೋಡುತ್ತಿದ್ದ ಹೇಮಂತ್ ನಾಯ್ಕನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ನಾಲ್ಕು ದಿನಗಳಾದರೂ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಫೆ.11 ರಂದು ಗೋಣಿಚೀಲದಲ್ಲಿ ಹೆಣವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಮೃತದೇಹ ಸುಟ್ಟು ಹಾಕಿದ್ದ.
ಇದೇ ವೇಳೆ ಫೆ.7 ರಂದು ಕೆಲಸಕ್ಕೆ ಹೋಗಿದ್ದ ಸಹೋದರ ಮನೆಗೆ ಬಾರದ ಹಿನ್ನೆಲೆಯಲ್ಲಿ ಫೆ.8 ರಂದು ಹೇಮಂತ್ ನಾಯ್ಕ ಸಹೋದರ ಮಂಜನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿ, ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ.
ಆರೋಪಿ ಹೇಮಂತ್ ದತ್ತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.