ಹಾಸನ/ಆಲೂರು: ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಸುಮಾರು ನೂರಕ್ಕೂ ಅಧಿಕ ಮಂದಿ ಯುವಕ-ಯುವತಿಯರನ್ನು ವಶಕ್ಕೆ ಪಡೆದಿರುವ ಪ್ರಕರಣ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.

ಆಲೂರು ತಾಲೂಕಿನ ಹೊಂಕರವಳ್ಳಿ ಸಮೀಪದ ಖಾಸಗಿ ಎಸ್ಟೇಟ್ನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ಶನಿವಾರ ರಾತ್ರಿ 12.05 ರ ಸಮಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಆಲೂರು ಹಾಗೂ ಸಕಲೇಶಪುರ ಪೊಲೀಸರು ದಾಳಿ ನಡೆಸಿ ವಿವಿಧ ಜಿಲ್ಲೆಯ ಯುವಕ-ಯುವತಿಯರನ್ನು ಹಾಗೂ 20ಕ್ಕೂ ಹೆಚ್ಚು ಐಷಾರಾಮಿ ಕಾರು, 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕೋವಿಡ್-19 ಎರಡನೇ ಅಲೆ ಇದ್ದರೂ ನಿಯಮಗಳನ್ನು ಗಾಳಿಗೆ ತೂರಿ ವಿವಿಧ ಜಿಲ್ಲೆ ಹಾಗೂ ಬೆಂಗಳೂರಿನಿಂದ ಬಂದು ಪಾರ್ಟಿಯಲ್ಲಿ ಭಾಗವಹಿಸಿ, ಮಾದಕ ವಸ್ತುಗಳ ಜೊತೆಗೆ ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸುತ್ತಿದ್ದರು. ಜೊತೆಗೆ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆ ಕೆಲವರು ವಾಹನಗಳ ಮೇಲೆ ತುರ್ತು ಸೇವೆ ಎಂಬ ನಾಮಫಲಕವನ್ನು ಹಾಕಿಕೊಂಡು ಬೆಂಗಳೂರಿನ ಪೊಲೀಸರಿಗೆ ಯಾಮಾರಿಸಿ ಹಾಸನಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ.

ನೂರಕ್ಕೂ ಅಧಿಕ ಯುವಕ-ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಾರ್ಯಕ್ರಮದ ಆಯೋಜಕರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯಕ್ಕೆ ಕಾರ್ಯಕ್ರಮದ ಆಯೋಜಕ ತಲೆಮರೆಸಿಕೊಂಡಿದ್ದಾನೆ. ವಶಕ್ಕೆ ಪಡೆದುಕೊಂಡವರನ್ನು ಆಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದ್ದಾರೆ.
ವಿಡಿಯೋ ನೋಡಿ 👇
https://m.facebook.com/story.php?story_fbid=3786703324772907&id=195025720607370