ಹಾಸನ: ನಗರ ಪ್ರದೇಶಗಳಲ್ಲಿರುವ ಕೆರೆಗಳ ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕೆರೆ ಸಂರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಮಿತಿಯ ಸಭೆ ನಡೆಸಿ ಮಾತನಾಡಿದ ಅವರು, ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಕೆರೆಗಳನ್ನು ಸರ್ವೆ ನಡೆಸಿ ಗಡಿ ನಿರ್ಧರಿಸಿ, ಒತ್ತುವರಿ ತೆರವುಗೊಳಿಸಬೇಕು ಎಂದರು.
ಈಗಾಗಲೇ ನಗರ ಪ್ರದೇಶಗಳಲ್ಲಿ 26 ಕೆರೆಗಳನ್ನು ಸರ್ವೇ ಮಾಡಲಾಗಿದ್ದು, ಇನ್ನುಳಿದ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಿ ಮಾಲಿನ್ಯ ಮುಕ್ತವಾಗಿರಬೇಕು ಹಾಗೂ ನೀರಿನ ಗುಣಮಟ್ಟ ಕಾಪಾಡಬೇಕು ಎಂದರಲ್ಲದೆ 177 ಸಣ್ಣ ನೀರಾವರಿ ಕೆರೆಗಳಿದ್ದು, ಅವುಗಳಲ್ಲಿ ಸರ್ವೇ ಆಗಿದೆ ಉಳಿದ ಕೆರೆಗಳನ್ನು ಸರ್ವೇ ಮುಕ್ತಾಯಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಮಾತನಾಡಿ, ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ಕೆರೆ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಕೆರೆ ಹಾಗೂ ಜಲ ಮೂಲಗಳಲ್ಲಿ ತ್ಯಾಜ್ಯ ಸುರಿಯದಂತೆ ಸೂಕ್ತ ಗಮನ ಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾರಾಜರಾಂ, ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್, ಜಂಟಿ ಕೃಷಿ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆಯ ಯೋಗೇಶ್ ಇತರರು ಹಾಜರಿದ್ದರು.