ಪ್ರಸಿದ್ಧ ಹಾಸನಾಂಬ ದೇವಿ ದರ್ಶನೋತ್ಸವ ನಾಳೆಯಿಂದ ಪ್ರಾರಂಭವಾಗಲಿದ್ದು

0

ಹಾಸನಾಂಬೆ ದರ್ಶನೋತ್ಸವಕ್ಕೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ

ಹಾಸನ ಅ.27. :ಪ್ರಸಿದ್ಧ ಹಾಸನಾಂಬ ದೇವಿ ದರ್ಶನೋತ್ಸವ ನಾಳೆಯಿಂದ ಪ್ರಾರಂಭವಾಗಲಿದ್ದು, ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಹಾಸನಾಂಬ ದೇವಾಲಯ ಆವರಣದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ಹಂತದ ಸಿದ್ದತೆಗಳನ್ನು ಪರಿಶೀಲಿಸಿದರು. ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ದೇವಾಲಯದ ಅಲಂಕಾರ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಬಹುತೇಕ ಪೂರ್ಣಗೊಂಡಿದೆ ಎಂದರು.

ಸಾರ್ವಜನಿಕರಿಗೆ ಅ.29 ರಿಂದ ನ.5ರ ವರೆಗೆ ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯ ವರೆಗೆ (ಮ.1 ರಿಂದ 3 ಗಂಟೆಗೆ) ನೈವೇದ್ಯ ಸಮರ್ಪಣೆ ಹೊರತು ಪಡಿಸಿ ದರ್ಶನಕ್ಕೆ ಅವಕಾಶವಿದೆ ಆದರೆ ಕಡ್ಡಾಯವಾಗಿ ಕನಿಷ್ಠ 1 ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಈ ಬಗ್ಗೆ ಮುದ್ರಿತ ಅಥವಾ ಡಿಜಿಟಲ್ ದಾಖಲೆಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಸಾರ್ವಜನಿಕರು ಲಸಿಕೆ ಪಡೆದಿರುವ ಬಗ್ಗೆ 15ಕಡೆ ತಪಾಸಣಾ ತಂಡ ನಿಯೋಜಿಸಲಾಗಿದೆ. ಅವರೆಲ್ಲರೂ ಭಕ್ತಾದಿಗಳೊಂದಿಗೆ ಸಂಯಮದಿಂದ ವರ್ತಿಸಿ ಮಾಹಿತಿ ಪಡೆದು ಪರಿಶೀಲನೆ ನೆಡೆಸಬೇಕು. ಎಲ್ಲಾ ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ಯಾವುದೇ ಲೋಪಗಳಿಲ್ಲದಂತೆ ದರ್ಶನ ಉತ್ಸವಕ್ಕೆ ಎಲ್ಲಾ ವ್ಯವಸ್ಥೆ ಮಾಡುವಂತೆ ಹಾಗೂ ಎಲ್ಲಾ ಇಲಾಖೆ ಅಧಿಕಾರಿ ಸಿಬ್ಬಂದಿ ಇದರ ಯಶಸ್ಸಿಗೆ ಶ್ರಮಿಸುವಂತೆ ಕರೆ ನೀಡಿದರು.

ಶಿಷ್ಟಾಚಾರ ಅತಿಥಿಗಣ್ಯರ ದರ್ಶನ ವ್ಯವಸ್ಥೆಗಳಿಗೆ ಅಧಿಕಾರಿಗಳ ತಂಡ ನಿಯೋಜಿಸಲಾಗಿದ್ದು, ಅವರು ಯಾವುದೇ ಕರ್ತವ್ಯ ಲೋಪವಿಲ್ಲದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಅಲ್ಲದೇ ದೇವಾಲಯದ ಬಗ್ಗೆ ಪ್ರತಿದಿನ ಪುಷ್ಪಾಲಂಕಾರ ಬದಲಾಯಿಸುವಂತೆ ಅವರು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಮಾತನಾಡಿ ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ಸಕಲ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆಗಳ ಕಾಲವೂ ಅಧಿಕಾರಿ ಸಿಬ್ಬಂದಿಗಳ ತಂಡ ತಪಾಸಣೆ ಕಾರ್ಯ ಹಾಗೂ ಭದ್ರತಾ ಕರ್ತವ್ಯದಲ್ಲಿ ತೊಡಗಲಿದ್ದಾರೆ. ಇತರ ಇಲಾಖಾ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪ ವಿಭಾಗಾಧಿಕಾರಿಗಳಾದ ಬಿ.ಎ.ಜಗದೀಶ್, ಪ್ರತೀಕ್ ಬಾಯಲ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


LEAVE A REPLY

Please enter your comment!
Please enter your name here