ಹಾಸನ: ಶಿವಲಿಂಗೇಗೌಡ ಕಾಂಗ್ರೆಸ್ ಸೇರಿದರೆ ಅವರೇ ಅರಸೀಕೆರೆ ಕ್ಷೇತ್ರದ ಅಭ್ಯರ್ಥಿ, ಅವರಿಗೆ ನೀಡುವ ಒಂದೊಂದು ವೋಟು ಕೂಡ ನನಗೆ ಕೊಟ್ಟಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಿವಲಿಂಗೇಗೌಡ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಅವರು ಬಡಕುಟುಂಬದಿಂದ ಬಂದು ಶಾಸಕರಾದವರು. ನೀವು ಅವರನ್ನು 3 ಸಾರಿ ಗೆಲ್ಸಿದ್ದೀರಾ, ಗೆಲ್ಲಿಸಿದ್ದು ಸಾರ್ಥಕ ಆಗಿದೆ. ವಿಧಾನಸಭಾ ಸದಸ್ಯರು ಆಗೋದು ಶೋಕಿ ಮಾಡಲು ಅಲ್ಲ.
ಸದನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು, ಜನರ ಪ್ರತಿನಿಧಿಯಾಗಿ ಜನರ ಸೇವೆ ಮಾಡಲು ಅಲ್ಲಿಗೆ ಹೋಗೋದು. ಇದನ್ನು ಶಿವಲಿಂಗೇಗೌಡ ಶಾಸಕರಾಗಿ ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಸದನದಲ್ಲಿ ಯಾವುದೇ ವಿಚಾರ ಬಂದರೂ ಕೂಡ ಭಾಗಿಯಾಗಿ ಮಾತನಾಡುತ್ತಾರೆ ಎಂದು ಶಿವಲಿಂಗೇಗೌಡ ಅವರನ್ನು ಹೊಗಳಿದರು.
ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದು, ನಾನು ಕುಮಾರಸ್ವಾಮಿ ಅಲ್ಲ. ಎತ್ತಿನಹೊಳೆ ಯೋಜನೆಯನ್ನೇ ಕುಮಾರಸ್ವಾಮಿ ವಿರೋಧಿಸಿದರು. ಉದ್ಘಾಟನೆಗೆ ಕೂಡ ಕುಮಾರಸ್ವಾಮಿ ಬರಲಿಲ್ಲ. ಶಿವಲಿಂಗೇಗೌಡ ಅವರನ್ನೂ ಹೋಗದಂತೆ ಹೇಳಿದ್ರು, ಆದರೂ
ಶಿವಲಿಂಗೇಗೌಡ ಬಂದಿದ್ದರೂ, ಈಗ ಎತ್ತಿನಹೊಳೆ ಯೋಜನೆ ನಿಂತಿದೆ. ಶಿವಲಿಂಗೇಗೌಡ ನನ್ನ ಹೊಗಳಿದ ಎನ್ನುವ ಒಂದೇ ಕಾರಣಕ್ಕೆ ಜೆಡಿಎಸ್ನವ್ರು ದೂರ ಮಾಡಿದರು. ನಾನು ನಿನಗೆ ಆಹ್ವಾನ ಕೊಡುತ್ತೇನೆ, ನಮ್ಮ ಪಕ್ಷಕ್ಕೆ ಬಂದು ಸೇರಿಕೊಳ್ಳಿ ಎಂದ ಅವರು, ಈ ಬಗ್ಗೆಯೂ ಅವರ ಜೊತೆ ನಾನು ಮಾತಾಡಿದ್ದೇನೆ. ಅವರು ನಮ್ಮ ಜೊತೆ ಬರೋಕೆ ಒಪ್ಪಿಕೊಂಡಿದ್ದಾರೆ ಎಂದರು.
ಕುಮಾರಸ್ವಾಮಿ ಅವರನ್ನ ನಾವು ಬೆಂಬಲ ನೀಡಿ ಸಿಎಂ ಮಾಡಿದ್ದೆವು. ಅವರು ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ
ಇರೋಕೆ ಶುರು ಮಾಡಿದರು. ಅವರನ್ನು ಭೇಟಿ ಆಗೋಕೆ ಹೋದ್ರೆ ಸೆಕ್ಯೂರಿಟಿಗಳು ಬಿಡುತ್ತಿರಲಿಲ್ಲ. ಹಾಗಾಗಿಯೇ ಅವರು ಅಧಿಕಾರ ಕಳೆದುಕೊಂಡರು. ಅಲ್ಲಮಪ್ರಭು ಹೇಳಿದ್ದಾರೆ, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನು ಅಲ್ಲಾ ಅಂತಾ ಎಂದು ಲೇವಡಿ ಮಾಡಿದರು.