ಹಾಸನ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಇಂದು ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸರಾಸರಿ ಪ್ರತಿದಿನ 25 ರಿಂದ 30 ಮಿಮೀ ಮಳೆಯಾಗುತ್ತಿದೆ. ನಿನ್ನೆ ಒಂದೇ ದಿನ ಸಕಲೇಶಪುರ ತಾಲೂಕಿನ ಹೆತ್ತೂರು, ಹೆಗ್ಗದ್ದೆ ಭಾಗದಲ್ಲಿ 150 ಮಿಮೀ ಮಳೆಯಾಗಿದೆ ಎಂದರು. ಕಳೆದ ನಾಲ್ಕು ದಿನಗಳಲ್ಲಿ 350 ಮನೆ ಕುಸಿದಿವೆ.
ಜನರು ಜಾಗೃತರಾಗಿ ಮುನ್ನೆಚ್ಚರಿಕೆವಹಿಸಿ ಮನೆ ಶಿಥಿಲಗೊಂಡರೆ ಕೂಡಲೇ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೆ ಅವರಿಗೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮಳೆಯಿಂದ 450 ಕೋಟಿಗೂ ಹೆಚ್ಚು ನಷ್ಟವಾಗಿದೆ.
ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 49 ಕೋಟಿ ನಷ್ಟವಾಗಿದೆ.
ಪರಿಹಾರ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು. ತುರ್ತು ಪರಿಹಾರಕ್ಕಾಗಿ ನಮ್ಮಲ್ಲಿ ಹಣ ಇದೆ ಎಂದರು.
ಅರಸೀಕೆರೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ತಲಾ ಹತ್ತು ಸಾವಿರ ನೀಡಲಾಗಿದೆ. 50 ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮನೆ ಬೀಳುತ್ತಿವೆ, ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
ಸಕಲೇಶಪುರ ತಾಲೂಕು ದೋಣಿಗಾಲ್ ಸಮೀಪ ಬದಲಿ ರಸ್ತೆ ಕಾಮಗಾರಿ ಅಂತಿಮ ಹಂತ ತಲುಪಿದೆ. ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದ ಅವರು, ವಾರಾಂತ್ಯದೊಳಗೆ ಕಾಮಗಾರಿ ಮುಗಿಯಲಿದ್ದು, ನಂತರ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಮಾರ್ಚ್ನಿಂದ ಇಲ್ಲಿಯವರೆಗೂ 1650 ಮನೆಗಳು ಕುಸಿದಿವೆ. ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಸುಮಾರು 6500 ಕೆರೆಗಳಿವೆ. 3000 ಸಾವಿರ ಕೆರೆಗಳು ಸಣ್ಣ ಇಲಾಖೆಗೆ ಸೇರುತ್ತವೆ. ಬಹುತೇಕ ಎಲ್ಲಾ ಕೆರೆಗಳು ತುಂಬಿವೆ. ಎಲ್ಲೆಲ್ಲಿ ನೀರು ಭರ್ತಿಯಾಗಿ ಅಪಾಯ ಹಂತದಲ್ಲಿಯೇ ಆ ಕೆರೆಯ ಕೋಡಿಗಳನ್ನು ವೈಜ್ಞಾನಿಕವಾಗಿ ಒಡೆಯಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
10 ದಿನದಲ್ಲಿ ಕೆಲಸ ಶುರು
ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಕೋಟೆ ತಡೆಗೋಡೆ ಕುಸಿತ ನಂತರ ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದೇವೆ. ಟೆಂಡರ್ ಕರೆಯಲು 25 ದಿನಗಳ ಕಾಲಾವಕಾಶ ಕೇಳಿದ್ರು. ಪ್ರವಾಸಿಗರು ಹಾಗೂ ಭಕ್ತರಿಗೆ ನಿಷೇಧ ಹೇರಿರುವುದರಿಂದ ಅಷ್ಟು ಸಮಯ ನೀಡಲು ಆಗಲ್ಲ, ಆದಷ್ಟು ಬೇಗ ಟೆಂಡರ್ ಕರೆಯಲು ಸೂಚಿಸಿದ್ದೇನೆ
10 ದಿನದೊಳಗೆ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಮಿಂಚು ಬಂಧಕವನ್ನು ಮೂರ್ನಾಲ್ಕು ದಿನದಲ್ಲಿ ರಿಪೇರಿ ಮಾಡಲಾಗುವುದು ಎಂದು ಡಿಸಿ ಹೇಳಿದರು.
ಮಳೆಗಾಲದಲ್ಲಿ ಗೊಬ್ಬರ ಹಾಕಬೇಡಿ:
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡಿ, ಜಿಲ್ಲೆಗೆ 32,500 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು, 38 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬಂದಿದೆ. ಆದರೆ ನಿರಂತರ ಮಳೆಯ ನಡುವೆಯೂ ರೈತರು ಹೆಚ್ಚು ಯೂರಿಯಾ ಬಳಕೆ ಮಾಡಿರುವುದರಿಂದ ಕೊರತೆಯಾಗಿದೆ. ಮಳೆ ವೇಳೆ ಗೊಬ್ಬರ ಹಾಕುವುದರಿಂದ ಯಾವುದೇ ಪ್ರಯೋಜನವಾಗದು ಎಂದರು. ಮತ್ತೆ 10.300 ಮೆಟ್ರಿಕ್ ಟನ್ ಗೊಬ್ಬರ ಬೇಕಿದ್ದು, ಈಗಾಗಲೂ 4500 ಮೆ.ಟನ್. ಬಂದಿದೆ. ನಾಳೆ 1000 ಸಾವಿರ ಮೆಟ್ರಿಕ್ ಟನ್ ಬರಲಿದೆ. ಗೊಬ್ಬರ ಸಿಗುವುದಿಲ್ಲ ಎಂದು ರೈತರು ಹತಾಶರಾಗುವುದು ಬೇಡ ಎಂದು ಧೈರ್ಯ ಹೇಳಿದರು. ಇದೇ ವೇಳೆ ಪಿಎಂ ಕಿಸಾನ್ ಯೋಜನೆಗೆ ಬ್ಯಾಂಕ್ ಪಾಸ್‌ಬುಕ್‌ಗೆ ಶೀಘ್ರ ಆಧಾರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವಂತೆ ಮನವಿ ಮಾಡಿದರು.
ಆ.11 ರಿಂದ ಗ್ರಂಥ ಸಂಸ್ಕೃತಿ ಏಳಿಗೆ: ನಮ್ಮ
ಪುಸ್ತಕ ದೇಣಿಗೆ ವಿಶೇಷ ಅಭಿಯಾನ ಶುರು

ಹಾಸನ: ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳನ್ನು ಓದಿನೆಡೆಗೆ ಆಕರ್ಷಿಸಲು ಆಗಸ್ಟ್ 11 ರಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಗ್ರಾಪಂ ವ್ಯಾಪ್ತಿಯ ಗ್ರಂಥಾಲಯಗಳನ್ನು ಉನ್ನತೀಕರಿಸುವುದು ಜೊತೆಗೆ ಹಳ್ಳಿ ಜನರಲ್ಲಿ ಓದುವ ಹವ್ಯಾಸ ಬೆಳೆಸುವುದು ಅಭಿಯಾನದ ಉದ್ದೇಶ ಎಂದರು.
ಜಿಲ್ಲೆಯಲ್ಲಿರುವ 260 ಗ್ರಾಪಂ ಗ್ರಂಥಾಲಯಗಳಿದ್ದು, ಇವುಗಳಲ್ಲಿ 47ನ್ನು ಡಿಜಿಟಲೀಕರಣ ಗೊಳಿಸಲಾಗಿದೆ.
ಹಾಗೆಯೇ ಹರ್‌ಘರ್ ತಿರಂಗಾ ಕಾರ್ಯಕ್ರಮದಡಿ 75 ನೇ ಸ್ವಾತಂತ್ರö್ಯ ಮಹೋತ್ಸವವನ್ನು ಜಿಲ್ಲೆಯಲ್ಲೂ ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ 1.20 ಲಕ್ಷ, ನಗರ-ಪಟ್ಟಣ ಪ್ರದೇಶಗಳಲ್ಲಿ 40 ಸಾವಿರ ಬಾವುಟ ಹಾರಿಸಲು ಯೋಜಿಸಲಾಗಿದೆ. ಪ್ರತಿಯೊಬ್ಬರೂ ರಾಷ್ಟçಧ್ವಜ ಹಾರಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ಕಾಂತರಾಜು ಮಾತನಾಡಿ, ಅನೇಕ ಕಡೆ ಗ್ರಂಥಾಲಯಗಳಿಗೆ ಮೂಲಭೂತ ಸೌಲಭ್ಯ ಇಲ್ಲ. ಇದರ ಕಡೆ ಗಮನ ಹರಿಸುವುದರ ಜೊತೆಗೆ ಗ್ರಂಥಪಾಲಕರಿಗೆ ಒಂದು ತಿಂಗಳ ತರಬೇತಿ ಕೊಡಿಸಲಾಗುತ್ತಿದೆ. 50 ಗ್ರಾಪಂ ಗಳಲ್ಲಿರುವ ಗ್ರಂಥಾಲಯಗಳನ್ನು ಉನ್ನತೀಕರಣ ಮಾಡಲು ಯೋಜಿಸಲಾಗಿದೆ ಎಂದರು.
ಓದಲು ಬೇಕಾದ ಸ್ಥಳಾವಕಾಶ ಕಲ್ಪಿಸುವುದು, ಪೀಠೋಪಕರಣ ನೀಡುವುದು ಸೇರಿದೆ. ಆ.11 ರಿಂದ ಗ್ರಂಥ ಸಂಸ್ಕೃತಿ ಏಳಿಗೆ, ನಮ್ಮ ಪುಸ್ತಕ ದೇಣಿಗೆ ಎಂಬ ವಿಶೇಷ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಇಡೀ ಜಿಲ್ಲೆಯಲ್ಲಿ ಅಭಿಯಾನ ನಡೆಸಿ ಓದುವ ಹವ್ಯಾಸ ಹೆಚ್ಚಿಸುವುದು ಜೊತೆಗೆ ಪುಸ್ತಕ ಸಂಗ್ರಹ ಮಾಡುವುದು ಇದರ ಉದ್ದೇಶ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ ಮಾತನಾಡಿ, ಈ ಕಾರ್ಯಕ್ರಮಕ್ಕೆ ಪರಿಷತ್ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಓದುವ ಹವ್ಯಾಸದಿಂದ ಒಳ್ಳೆಯ ಸಂಸ್ಕೃತಿ ಮೂಡಲಿದೆ. ಇದರಲ್ಲಿ ಹಳ್ಳಿ ಜನರು ಮಾತ್ರವಲ್ಲದೆ, ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳುವ ಉದ್ದೇಶ ಇದೆ. ಜಿಲ್ಲಾ ಸಮಿತಿಯಿಂದ ಹೋಬಳಿವರೆಗೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಇದೇ ವೇಳೆ ಆಜಾದಿ ಕ ಅಮೃತ ಮಹೋತ್ಸವ ಹಿನ್ನೆಲೆ ಆ.13 ರಿಂದ 15 ರ ವರೆಗೆ ಪ್ರತಿ ಮನೆಗಳಲ್ಲಿ ಹಾರಿಸಲು ಉದ್ದೇಶಿಸಿರುವ ರಾಷ್ಟçಧ್ವಜವನ್ನು ಅನಾವರಣಗೊಳಿಸಲಾಯಿತು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಹಿರಿಯ ವಾರ್ತಾ ಮತ್ತು ಸಂಪರ್ಕಾಧಿಕಾರಿ ವಿನೋದ್ ಚಂದ್ರ ಇದ್ದರು.